ADVERTISEMENT

ಸಿಸಿಬಿ: ಒಂದೇ ದಿನ 26 ಪೊಲೀಸರ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 16:26 IST
Last Updated 23 ಫೆಬ್ರುವರಿ 2022, 16:26 IST
ಸಿಸಿಬಿ
ಸಿಸಿಬಿ   

ಬೆಂಗಳೂರು: ಸಿಸಿಬಿಯಲ್ಲಿ ಹಲವು ವರ್ಷಗಳಿಂದ ಬೇರೂರಿದ್ದ 26 ಪೊಲೀಸರನ್ನು ವರ್ಗಾವಣೆ ಮಾಡಲಾಗಿದ್ದು, ಈ ಬಗ್ಗೆ ಡಿಸಿಪಿ (ಆಡಳಿತ) ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ.

‘ನಗರದಲ್ಲಿ ನಡೆಯುವ ಅಪರಾಧಗಳನ್ನು ಭೇದಿಸುತ್ತಿರುವ ಸಿಸಿಬಿ ವಿಭಾಗದಲ್ಲಿ ಕೆಲವರು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಎಎಸ್‌ಐ, ಹೆಡ್‌ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌ಗಳ ಪಟ್ಟಿ ಮಾಡಿ ವರ್ಗಾವಣೆ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಫೆ. 21ರಂದು ವರ್ಗಾವಣೆ ಆದೇಶ ಹೊರಬಿದ್ದಿದೆ. ಖಾಲಿಯಾದ ಹುದ್ದೆಗಳಿಗೆ ಹೊಸಬರನ್ನು ವರ್ಗಾವಣೆ ಮಾಡುವ ಪ್ರಕ್ರಿಯೆ ಸಹ ಆರಂಭವಾಗಿದೆ’ ಎಂದೂ ತಿಳಿಸಿದರು.

ADVERTISEMENT

ಒಒಡಿ ರದ್ದು: ‘ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ಕೆಲಸ ಮಾಡುತ್ತಿದ್ದ 11 ಪೊಲೀಸರನ್ನು ಅಧಿಕೃತ ಕಾರ್ಯನಿಮಿತ್ತ (ಒಒಡಿ) ಸಿಸಿಬಿಗೆ ನಿಯೋಜಿಸಲಾಗಿತ್ತು. ಇದೀಗ ಒಒಡಿ ರದ್ದುಪಡಿಸಿ, 11 ಮಂದಿಯನ್ನೂ ಮಾತೃ ಠಾಣೆಗೆ ಕಳುಹಿಸಲಾಗಿದೆ’ ಎಂದು ಅಧಿಕಾರಿ ಹೇಳಿದರು.

ಸಿಸಿಬಿ ಜಂಟಿ ಕಮಿಷನರ್ ಆಗಿದ್ದ ಸಂದೀಪ್‌ ಪಾಟೀಲ ಅವರನ್ನು ಇತ್ತೀಚೆಗಷ್ಟೇ ವರ್ಗಾವಣೆ ಮಾಡಲಾಗಿತ್ತು. ಅವರ ಹುದ್ದೆಗೆ ಹೊಸದಾಗಿ ಬಂದಿರುವ ರಮಣ್ ಗುಪ್ತ, ಸಿಸಿಬಿ ಪೊಲೀಸರ ವರ್ಗಾವಣೆಗೆ ವರದಿ ನೀಡಿದ್ದರೆಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.