ADVERTISEMENT

Greater Bengaluru: ಪಾಲಿಕೆ ಚುನಾವಣೆಗೆ ಜನಗಣತಿ ಅಡ್ಡಿ?

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 0:19 IST
Last Updated 15 ಫೆಬ್ರುವರಿ 2026, 0:19 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ಬರುವ ಏಪ್ರಿಲ್‌ನಿಂದ ಜನಗಣತಿ ಆರಂಭವಾಗಲಿದ್ದು, ಸುಪ್ರೀಂ ಕೋರ್ಟ್‌ ಆದೇಶದಂತೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ಜೂನ್‌ ಒಳಗೆ ನಡೆಯುವ ಸಾಧ್ಯತೆ ಕಡಿಮೆಯಾಗಿದೆ.

ಜನಗಣತಿಯು ಏಪ್ರಿಲ್‌ನಲ್ಲಿ ಶುರುವಾಗಲಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಒಮ್ಮೆ ಜನಗಣತಿ ಶುರುವಾದರೆ, ಆ ಅಂಕಿಸಂಖ್ಯೆಗಳ ಆಧಾರದ ಮೇಲೆ ಚುನಾವಣೆ ನಡೆಸಬೇಕು ಎಂಬ ಬೇಡಿಕೆ ಶುರುವಾಗಲಿದೆ. ಅಲ್ಲದೆ ಜನಗಣತಿ ಬಳಿಕ ಜನಸಂಖ್ಯೆ ಹೆಚ್ಚಾಗಲಿದ್ದು, ಮತ್ತೆ ವಾರ್ಡ್‌ಗಳ ಮರುವಿಂಗಡಣೆ ಮಾಡಬೇಕಾಗುತ್ತದೆ.

ADVERTISEMENT

2011ರ ಜನಗಣತಿ ಆಧರಿಸಿ ಸದ್ಯ ವಾರ್ಡ್‌ಗಳ ವಿಂಗಡಣೆ ಮಾಡಲಾಗಿದೆ. ಕೋವಿಡ್‌ ಕಾರಣದಿಂದಾಗಿ 2021ರಲ್ಲಿ ಜನಗಣತಿ ನಡೆದಿರಲಿಲ್ಲ. ಈ ವರ್ಷ ಗಣತಿ ನಡೆಯಲಿದ್ದು, ಅದರ ಅಂಕಿ ಸಂಖ್ಯೆಗಳ ಪೂರ್ಣ ಮಾಹಿತಿ ಲಭ್ಯವಾಗಲು 2028ರವರೆಗೂ ಕಾಯಬೇಕಾಗುತ್ತದೆ. ಈ ವರ್ಷ ನಡೆಯುವ ಜನಗಣತಿಯ ಅಂಕಿ ಸಂಖ್ಯೆಗಳನ್ನು ಆಧರಿಸಿ, ವಾರ್ಡ್‌ಗಳ ಮರುವಿಂಗಡಣೆ ಮಾಡಬೇಕು ಎಂದು ಯಾರಾದರೂ ಕೋರ್ಟ್‌ ಮೊರೆ ಹೋದರೆ ಜೂನ್‌ ಒಳಗೆ ಚುನಾವಣೆ ನಡೆಯುವುದು ಅನುಮಾನ ಎಂದು ಪಾಲಿಕೆಯ ಮಾಜಿ ಸದಸ್ಯರೊಬ್ಬರು ತಿಳಿಸಿದರು.

ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 369 ವಾರ್ಡ್‌ಗಳಿವೆ. ಇದರಲ್ಲಿ ಶೇ 50ರಷ್ಟು ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಆದರೆ, ಮಹಿಳೆಯರಿಗೆ 50ರಷ್ಟು ಮೀಸಲಾತಿ ನೀಡಿಲ್ಲ ಎಂದು ಕೆಲವರು ಈಗಾಗಲೇ ಆರೋಪಿಸಿದ್ದಾರೆ.

ಈ ಮಧ್ಯೆ ಗ್ರಾಮ ಪಂಚಾಯಿತಿಗಳ ಅವಧಿ ಮುಗಿಯುತ್ತ ಬಂದಿದ್ದು, ನಗರದ ಸುತ್ತಮುತ್ತಲಿನ ಇನ್ನಷ್ಟು ಪ್ರದೇಶಗಳನ್ನು ಜಿಬಿಎ ವ್ಯಾಪ್ತಿಗೆ ಸೇರಿಸುವ ಬಗ್ಗೆ ಚರ್ಚೆ ನಡೆದಿದೆ. ಒಂದು ವೇಳೆ ಇನ್ನಷ್ಟು ಪ್ರದೇಶಗಳು ಸೇರ್ಪಡೆಯಾದರೆ, ವಾರ್ಡ್‌ಗಳ ಸಂಖ್ಯೆ, ವ್ಯಾಪ್ತಿಯಲ್ಲಿ ಬದಲಾವಣೆಯಾಗಲಿದೆ. ಅಲ್ಲದೆ ಮೀಸಲಾತಿಯಲ್ಲೂ ವ್ಯತ್ಯಾಸವಾಗಲಿದೆ. ಇದಕ್ಕೆಲ್ಲ ಸಾಕಷ್ಟು ಸಮಯಬೇಕಾಗುತ್ತದೆ. ಹೀಗಾಗಿ ಚುನಾವಣೆ ನಡೆಯುವುದು ಅನುಮಾನ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.