ADVERTISEMENT

ಪೆರಿಫೆರಲ್‌ ವರ್ತುಲ ರಸ್ತೆ: ಸಾರ್ವಜನಿಕ ಸಮಾಲೋಚನಾ ಸಭೆ ಕೈಬಿಡುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 16:44 IST
Last Updated 13 ಆಗಸ್ಟ್ 2020, 16:44 IST
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕೈಗೆತ್ತಿಕೊಳ್ಳಲಿರುವ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್‌) ಕಾಮಗಾರಿಗಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಇದೇ 18 ರಂದು ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಸಮಾಲೋಚನೆಯನ್ನು ಕೈಬಿಡಬೇಕು ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆ ಒತ್ತಾಯಿಸಿದೆ.

ಸಾರ್ವಜನಿಕ ಸಮಾಲೋಚನೆ ನಡೆಸದೆಯೇ ಪಿಆರ್‌ಆರ್‌ ಯೋಜನೆ ರೂಪಿಸಲಾಗಿದೆ. 65 ಕಿ.ಮೀ ಉದ್ದದ ಈ ರಸ್ತೆ ಕಾಮಗಾರಿಯಿಂದ 33 ಸಾವಿರ ಮರಗಳು,ಜಲಮೂಲಗಳು, ಜಲಾನಯನ ಪ್ರದೇಶಗಳು ಮತ್ತು ಮೀಸಲು ಅರಣ್ಯಗಳು ಅಪಾಯಕ್ಕೆ ಸಿಲುಕಲಿವೆ. ದೊಡ್ಡಬಳ್ಳಾಪುರ ರಸ್ತೆಯ ಸಿಂಗನಾಯಕನಹಳ್ಳಿಯ ನಿತ್ಯೋತ್ಸವ ಕಲ್ಯಾಣ ಮಂಟಪದಲ್ಲಿಈ ಯೋಜನೆ ಬಗ್ಗೆ ಇದೇ 18ರಂದು ಬೆಳಿಗ್ಗೆ 11ಕ್ಕೆ ಸಾರ್ವಜನಿಕ ಸಮಾಲೋಚನೆ ಏರ್ಪಡಿಸಲಾಗಿದೆ.

‘ಈ ಯೋಜನೆಯಿಂದ ಕೇವಲ 200 ಮರಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಬಿಡಿಎ ಆರಂಭದಲ್ಲಿ ಹೇಳಿತ್ತು. ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ (ಇಐಎ) ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತಿರಸ್ಕರಿಸಿತ್ತು. ಆ ಬಳಿಕ ಯೋಜನೆಗೆ 16,685 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಪರಿಷ್ಕೃತ ವರದಿ ಸಲ್ಲಿಸಿದೆ. ಆ ಬಳಿಕವೂ ಸುಪ್ರೀಂ ಕೋರ್ಟ್‌ ನಿಖರವಾದ ಇಐಎಯನ್ನು ಹೊಸತಾಗಿ ಸಿದ್ಧಪಡಿಸಬೇಕು ಎಂದು ಸೂಚಿಸಿತು. ಆ ಬಳಿಕವಷ್ಟೇ ಈ ಯೋಜನೆ 33ಸಾವಿರಕ್ಕೂ ಹೆಚ್ಚು ಮರಗಳನ್ನು ಬಲಿ ಪಡೆಯಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ’ ಎಂದು ಸಿಎಫ್‌ಬಿಯ ಶಿಲ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇಷ್ಟೆಲ್ಲ ಆದ ಬಳಿಕ ಬಿಡಿಎ ಪಿಆರ್‌ಆರ್‌ ಯೋಜನೆಯ ವಿನ್ಯಾಸವನ್ನು ಬದಲಾಯಿಸಿದೆ. ಹಾಗಾಗಿ ಇದನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಪ್ರಕಾರ ಹೊಸ ಯೋಜನೆ ಎಂದೇ ಪರಿಗಣಿಸಬೇಕಾಗುತ್ತದೆ. ಇದಕ್ಕೆ ಈಗಿನ ಇಐಎ ಅನ್ವಯಿಸದು. ಕಾಯ್ದೆ, ಸೆಕ್ಷನ್ 14 (A) ಪ್ರಕಾರ ಹೊಸ ಇಐಎ ರಚಿಸಬೇಕಾಗಿದೆ. ಸರ್ಕಾರ ಈ ಯೋಜನೆ ಸಲುವಾಗಿ ಮತ್ತೆ ಕಾರ್ಯಸಾಧ್ಯತಾ ಅಧ್ಯಯನ, ಸಾರ್ವಜನಿಕ ವಿಚಾರಣೆಗಳನ್ನು ನಡೆಸಬೇಕಾಗುತ್ತದೆ. ಈ ಯೋಜನೆಯ ಪರ್ಯಾಯಗಳ ಬಗ್ಗೆಯೂ ಪರಿಗಣಿಸಬೇಕಾಗುತ್ತದೆ. ಬಜೆಟ್ ಅನುಮೋದನೆಯನ್ನು ಪಡೆದು ಹೊಸ ಅಭಿವೃದ್ಧಿ ಪ್ರಸ್ತಾಪವನ್ನು ಸಿದ್ಧಪಡಿಸಬೇಕಾಗುತ್ತದೆ. ಹಳೆಯ ಇಐಎ ಆಧಾರದಲ್ಲಿ ಹೊಸ ಯೋಜನೆಯ ಮೌಲ್ಯಮಾಪನ ನಡೆಸುವುದು ಕಾನೂನು ಬಾಹಿರ’ ಎಂದು ಅವರು ಆರೋಪಿಸಿದರು.

ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಅದನ್ನು ಸಾರ್ವಜನಿಕ ಪರಿಶೀಲನೆಗಾಗಿ ಒಳಪಡಿಸುವುದು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಅನ್ವಯ ಕಡ್ಡಾಯ. ಹಾಗಾಗಿ ಹೊಸ ಯೋಜನೆಯ ಸಮಗ್ರ ವಿವರಗಳನ್ನು ಸಾರ್ವಜನಿಕರ ಮುಂದೆ ಪ್ರಸ್ತುತಪಡಿಸಬೇಕು ಎಂದು ಅವರು ಒತ್ತಾಯಿಸಿದರು.

‘ಕೋವಿಡ್ ಸೋಂಕು ಹಬ್ಬುತ್ತಿರುವ ಸಂದರ್ಭದಲ್ಲಿ ಇಂತಹ ನಿರ್ಣಾಯಕ ಯೋಜನೆಯ ಸಮಾಲೋಚನೆಗೆ ಸಭೆ ಸೇರುವುದು ಅಸುರಕ್ಷಿತ ಮತ್ತು ಬೇಜವಾಬ್ದಾರಿಯ ಪರಮಾವಧಿ. ಇದು ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆ’ ಎಂದೂ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.