ಬೆಂಗಳೂರು: ರಾಜ್ಯದ ಮಹಾ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ ಇಲ್ಲವೇ ನೇರ ಪಾವತಿ ವ್ಯವಸ್ಥೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಜೂನ್ 18 ರಿಂದ ‘ಚಲೋ ಬೆಂಗಳೂರು’ ನಡೆಸಿ, ಮುಷ್ಕರ ಹಮ್ಮಿಕೊಳ್ಳಲು ರಾಜ್ಯ ನೀರು ಸರಬರಾಜು ನೌಕರರ ಮಹಾ ಸಂಘ ನಿರ್ಧರಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಪಾವಗಡ ಶ್ರೀರಾಮ್, ‘ನೇರ ನೇಮಕಾತಿ ಮಾಡುವುದಾಗಿ 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. 2018ರವರೆಗೆ ಅವರೇ ಮುಖ್ಯಮಂತ್ರಿಯಾಗಿದ್ದರೂ ನೇರ ನೇಮಕಾತಿ ಮಾಡಿರಲಿಲ್ಲ. ಆನಂತರ ಐದು ವರ್ಷಗಳ ಬಳಿಕ ಅವರೇ ಮುಖ್ಯಮಂತ್ರಿ ಆದರೂ ನೇರ ನೇಮಕಾತಿ ಮಾಡಿಲ್ಲ’ ಎಂದು ದೂರಿದರು.
ಪೌರಕಾರ್ಮಿಕರಂತೆ ನೀರು ಸರಬರಾಜು ನೌಕರರಿಗೂ ವಿಶೇಷ ನೇಮಕಾತಿ, ನೇರ ನೇಮಕಾತಿ ಮಾಡುವ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಪೌರಾಡಳಿತ ನಿರ್ದೇಶಕರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಆನಂತರ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಂದ ಮಾಹಿತಿ ಪಡೆದುಕೊಳ್ಳಲಾಗಿತ್ತು. ಈ ಕಡತವನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿತ್ತು. ಆರ್ಥಿಕ ಇಲಾಖೆ ಒಪ್ಪಿಗೆ ನೀಡದೇ ಈಗಿರುವಂತೆಯೇ ಮುಂದುವರಿಸಲು ಸೂಚಿಸಿ ಕಡತ ವಾಪಸ್ ಕಳಿಸಿತ್ತು ಎಂದು ತಿಳಿಸಿದರು.
2025ರಲ್ಲಿ ಮತ್ತೆ ಕಡತವನ್ನು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದಿನದ 24 ಗಂಟೆ ಕೆಲಸ ಮಾಡಬೇಕಿರುವ ನೀರು ಸರಬರಾಜು ನೌಕರರು ₹ 11 ಸಾವಿರ ವೇತನವಷ್ಟೇ ಪಡೆಯುತ್ತಿದ್ದಾರೆ. ಇದರಿಂದ ಜೀವನ ಸಾಗಿಸಲು ಸಾಧ್ಯವಿಲ್ಲ. ಅದಕ್ಕಾಗಿ ಜೂನ್ 18ರಂದು ರಾಜ್ಯ ಎಲ್ಲ ಕಡೆಯಿಂದ ‘ಚಲೊ ಬೆಂಗಳೂರು’ ನಡೆಸಲಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಪ್ರತಿಭಟನೆಯಲ್ಲಿ 6,000 ನೌಕರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಂಘದ ಪದಾಧಿಕಾರಿಗಳಾದ ರಮೇಶ್, ಪುರುಷೋತ್ತಮ, ಮಂಜುನಾಥ, ಸೋಮಣ್ಣ, ಸತೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.