ADVERTISEMENT

ಬಾಲ ಸ್ವಾಸ್ಥ್ಯ ಕಾರ್ಯಕ್ರಮ: ಮಕ್ಕಳನ್ನು ಕಾಡುತ್ತಿದೆ ನಾನಾ ಅನಾರೋಗ್ಯ ಸಮಸ್ಯೆ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ: ತಪಾಸಣೆಯಲ್ಲಿ 33.59 ಲಕ್ಷ ಮಕ್ಕಳಲ್ಲಿ ಸಮಸ್ಯೆ ಪತ್ತೆ

ವರುಣ ಹೆಗಡೆ
Published 30 ಡಿಸೆಂಬರ್ 2025, 18:51 IST
Last Updated 30 ಡಿಸೆಂಬರ್ 2025, 18:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಸೇರಿ ವಿವಿಧ ಕಾರಣಗಳಿಂದ ಮಕ್ಕಳಲ್ಲಿಯೂ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಆರೋಗ್ಯ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್‌ಬಿಎಸ್‌ಕೆ) ನಡೆಸಿದ ತಪಾಸಣೆಯಲ್ಲಿ 33.59 ಲಕ್ಷ ಮಕ್ಕಳಲ್ಲಿ ವಿವಿಧ ಅನಾರೋಗ್ಯ ಸಮಸ್ಯೆಗಳು ಪತ್ತೆಯಾಗಿವೆ.

ಆರಂಭಿಕ ಹಂತದಲ್ಲಿಯೇ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಿ, ಚಿಕಿತ್ಸೆ ಒದಗಿಸುವ ಸಂಬಂಧ ಅಂಗನವಾಡಿ ಹಾಗೂ ಶಾಲಾ ಹಂತದಲ್ಲಿಯೇ ಈ ಕಾರ್ಯಕ್ರಮದಡಿ 18 ವರ್ಷದೊಳಗಿನವರಿಗೆ ತಪಾಸಣೆ ನಡೆಸಲಾಗುತ್ತಿದೆ. ಹುಟ್ಟಿನ ದೋಷಗಳು, ರೋಗಗಳು, ನ್ಯೂನತೆ ಮತ್ತು ಬೆಳವಣಿಗೆ ಕುಂಠಿತವಾಗಿರುವುದನ್ನು ಗುರುತಿಸುವುದು ಹಾಗೂ ಉಚಿತವಾಗಿ ಚಿಕಿತ್ಸೆ ಒದಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. 2025–26ನೇ ಸಾಲಿನಲ್ಲಿ 93.41 ಲಕ್ಷ ಮಕ್ಕಳು ತಪಾಸಣೆಗೆ ನೋಂದಣಿಯಾಗಿದ್ದು, ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ 80.27 ಲಕ್ಷ ಮಕ್ಕಳನ್ನು ತಪಾಸಣೆ ಮಾಡಲಾಗಿದೆ.

ತಪಾಸಣೆಗೆ ಒಳಪಟ್ಟ ಹಲವು ಮಕ್ಕಳಲ್ಲಿ ಚರ್ಮ ಹಾಗೂ ದಂತದ ಸಮಸ್ಯೆ, ದೃಷ್ಟಿ ಹಾಗೂ ಶ್ರವಣ ದೋಷ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಸಮಸ್ಯೆ, ಬೆಳವಣಿಗೆ ಕುಂಠಿತವಾಗಿರುವುದು, ಕಲಿಕಾ ನ್ಯೂನತೆ, ಅಪೌಷ್ಟಿಕತೆ, ಅನಿಮಿಯಾ (ರಕ್ತಹೀನತೆ) ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳು ದೃಢಪಟ್ಟಿವೆ.

ADVERTISEMENT

ಮಕ್ಕಳಿಗೆ ಅಗತ್ಯ ಚಿಕಿತ್ಸೆ: ಆರ್‌ಬಿಎಸ್‌ಕೆ ತಂಡ ನಡೆಸಿದ ತಪಾಸಣೆಯಲ್ಲಿ ಸಮಸ್ಯೆ ಪತ್ತೆಯಾದ 33.59 ಲಕ್ಷ ಮಕ್ಕಳಲ್ಲಿ, 31.22 ಲಕ್ಷ ಮಕ್ಕಳಿಗೆ ಚಿಕಿತ್ಸೆ ಪಡೆಯಲು ಶಿಫಾರಸು ಮಾಡಲಾಗಿದೆ. ಅವರಲ್ಲಿ 27.74 ಲಕ್ಷ ಮಕ್ಕಳನ್ನು ಈಗಾಗಲೇ ಚಿಕಿತ್ಸೆಗೆ ಒಳಪಡಿಸಲಾಗಿದೆ. ನೇತ್ರ ಸಮಸ್ಯೆ ಪತ್ತೆಯಾದ ಮಕ್ಕಳಿಗೆ ಹೆಚ್ಚಿನ ತಪಾಸಣೆ ನಡೆಸಿ, ಕನ್ನಡಕಗಳನ್ನೂ ವಿತರಿಸಲಾಗುತ್ತಿದೆ. ಅದೇ ರೀತಿ, ದಂತ, ಶ್ರವಣ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.  

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ತಪಾಸಣೆ ನಡೆಸುತ್ತಿದ್ದು, ಸಮಸ್ಯೆ ಪತ್ತೆಯಾದವರಿಗೆ ಸುವರ್ಣ ಸುರಕ್ಷಾ ಟ್ರಸ್ಟ್ ಅಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಜನ್ಮತಃ ಬಂದಿರುವ ರೋಗಗಳನ್ನು ಗುರುತಿಸುವ ಜತೆಗೆ, ವಿವಿಧ ಅನಾರೋಗ್ಯ ಸಮಸ್ಯೆಗಳು, ಪೋಷಕಾಂಶ ಕೊರತೆ, ಬೆಳವಣಿಗೆ ಕುಂಠಿತವಾಗಿರುವುದು ಹಾಗೂ ಅಂಗವಿಕಲತೆಯನ್ನೂ ಗುರುತಿಸಲಾಗುತ್ತಿದೆ. ಅಗತ್ಯ ಚಿಕಿತ್ಸೆಗಳನ್ನು ಒದಗಿಸುವ ಮೂಲಕ ಮಕ್ಕಳ ಆರೋಗ್ಯ ವೃದ್ಧಿಗೆ ಶ್ರಮಿಸಲಾಗುತ್ತಿದೆ’ ಎಂದು ಆರ್‌ಬಿಎಸ್‌ಕೆ ತಂಡದ ಪ್ರತಿನಿಧಿಯೊಬ್ಬರು ತಿಳಿಸಿದರು.

ಡಾ. ಸಂಜಯ್ ಕೆ.ಎಸ್.
ಮಕ್ಕಳಲ್ಲಿನ ಅನಾರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭ ಸಾಧ್ಯವಾಗಲಿದೆ. ಕಲಿಕಾ ತೊಡಕುಗಳನ್ನೂ ನಿವಾರಿಸಬಹುದು
ಡಾ. ಸಂಜಯ್ ಕೆ.ಎಸ್. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ

430 ಮೊಬೈಲ್ ಆರೋಗ್ಯ ತಂಡ

ಆರ್‌ಬಿಎಸ್‌ಕೆ ಅಡಿ ಅಂಗನವಾಡಿ ಮಕ್ಕಳಿಗೆ ವರ್ಷಕ್ಕೆ ಎರಡು ಬಾರಿ ಶಾಲಾ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ ಒಂದು ಬಾರಿ ತಪಾಸಣೆ ಮಾಡಲಾಗುತ್ತಿದೆ. ಸರ್ಕಾರಿ ಮತ್ತು ಅನುದಾನಿತ ಶಾಲಾ– ಕಾಲೇಜುಗಳ ಮಕ್ಕಳ ತಪಾಸಣೆಗೆ 430 ಮೊಬೈಲ್ ಆರೋಗ್ಯ ತಂಡಗಳನ್ನು ರಚಿಸಲಾಗಿದೆ.  ಮಕ್ಕಳಲ್ಲಿನ ಅನಾರೋಗ್ಯ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಲು ರಾಜ್ಯದ 18 ಜಿಲ್ಲೆಗಳಲ್ಲಿ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರಗಳು (ಡಿಇಐಸಿ) ಕಾರ್ಯನಿರ್ವಹಿಸುತ್ತಿವೆ. ಶಾಲೆಗಳಿಗೆ ಭೇಟಿ ನೀಡುವ ಮೊಬೈಲ್‌ ಆರೋಗ್ಯ ತಂಡಗಳು ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಡಿಇಐಸಿ ಕೇಂದ್ರಗಳಿಗೆ ಶಿಫಾರಸು ಮಾಡುತ್ತಿವೆ. ಇಲ್ಲಿ ತಜ್ಞ ವೈದ್ಯರು ಚಿಕಿತ್ಸೆ ಒದಗಿಸಲಿದ್ದಾರೆ.

ಸ್ಥೂಲಕಾಯ ಅಧಿಕ ರಕ್ತದೊತ್ತಡ’

‘ಸ್ಥೂಲಕಾಯ ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅತಿಯಾಗಿ ಮೊಬೈಲ್ ಬಳಸಿದಲ್ಲಿ ದೃಷ್ಟಿ ಸಂಬಂಧಿತ ಸಮಸ್ಯೆಗಳ ಜತೆಗೆ ನಿದ್ದೆ ಹಾಗೂ ಕಲಿಕೆಯಲ್ಲಿಯೂ ವ್ಯತ್ಯಾಸವಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕುರುಕಲು ತಿಂಡಿಗಳ ಸೇವನೆಯನ್ನು ತ್ಯಜಿಸಬೇಕು. ದೈಹಿಕ ಚಟುವಟಿಕೆಗೆ ಆದ್ಯತೆ ನೀಡಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು’ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ.ಸಂಜಯ್ ಕೆ.ಎಸ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.