ADVERTISEMENT

ಬೆಂಗಳೂರು | ಸಂಭ್ರಮದ ಕ್ರಿಸ್‌ಮಸ್; ಚರ್ಚ್‌ಗಳಲ್ಲಿ ಶಾಂತಿದೂತ ಯೇಸು ಸ್ಮರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 16:27 IST
Last Updated 25 ಡಿಸೆಂಬರ್ 2023, 16:27 IST
<div class="paragraphs"><p>ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಸೋಮವಾರ ಕ್ರಿಸ್‌ಮಸ್ ಹಬ್ಬದ ಆಚರಣೆ ಅಂಗವಾಗಿ ಯುವಜನರು&nbsp;ಭಾರಿ ಸಂಖ್ಯೆಯಲ್ಲಿ ಜಮಾಯಿಸಿದರು. </p></div>

ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಸೋಮವಾರ ಕ್ರಿಸ್‌ಮಸ್ ಹಬ್ಬದ ಆಚರಣೆ ಅಂಗವಾಗಿ ಯುವಜನರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದರು.

   

–ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಬೆಂಗಳೂರು: ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕ್ರೈಸ್ತರು ಚರ್ಚ್‌ಗಳಿಗೆ ಕುಟುಂಬದ ಸದಸ್ಯರೊಂದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು.

ADVERTISEMENT

ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌ಗೆ ಕ್ರೈಸ್ತ ಸಮುದಾಯದವರು ಅಲ್ಲದೇ, ವಿವಿಧ ಧರ್ಮಗಳ ಜನರೂ ಭೇಟಿ ನೀಡಿದರು. ಜನಜಾತ್ರೆಯೇ ನಿರ್ಮಾಣವಾಗಿತ್ತು. ಯೇಸುವಿನ ಜೀವನ ಬಿಂಬಿಸುವ ಗೋದಲಿ ಮುಂದೆ ನಿಂತು ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡರು. 

ಎಲ್ಲ ಚರ್ಚ್‌ಗಳಲ್ಲಿ ಭಕ್ತರು ತುಂಬಿಹೋಗಿದ್ದು, ಹಲವು ಕಡೆಗಳಲ್ಲಿ ಚರ್ಚ್‌ ಹೊರಗೆಯೂ ಶಾಮಿಯಾನ ಹಾಕಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.  ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌, ಫ್ರೇಜರ್‌ ಟೌನ್‌ನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆ ಬಳಿಯ ಸೇಂಟ್‌ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ಸ್‌ ಚರ್ಚ್, ಸೇಂಟ್ ಜಾನ್ಸ್ ಚರ್ಚ್ ಸೇರಿದಂತೆ ಎಲ್ಲ ಚರ್ಚ್‌ಗಳಲ್ಲಿ ಬಲಿಪೂಜೆ, ವಿಶೇಷ ಪ್ರಾರ್ಥನೆ, ಶಾಂತಿ ಸಂದೇಶ ಕಾರ್ಯಕ್ರಮಗಳು ನಡೆದವು.

‘ಯೇಸುಕ್ರಿಸ್ತರು ಹುಟ್ಟಿದ ದಿನ ಇಡಿ ಮಾನವಕುಲಕ್ಕೆ ಹರ್ಷದ ದಿನ. ಪಾಪಿಗಳ ಹಿತಬಯಸಿದ ಯೇಸುಕ್ರಿಸ್ತರು ಮಾನವರಲ್ಲಿನ ತಾರತಮ್ಯ ನಿವಾರಿಸಿದ್ದಾರೆ’ ಎಂದು ಚರ್ಚ್‌ಗಳಲ್ಲಿ ಧರ್ಮಗುರುಗಳು ಸಂದೇಶ ನೀಡಿದರು.

ಕ್ರೈಸ್ತರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಕ್ರಿಸ್‌ಮಸ್‌ ಪ್ರಯುಕ್ತ ಸಿದ್ಧಪಡಿಸಿದ್ದ ಪಳಾರಗಳನ್ನು ಬಂಧುಗಳಿಗೆ, ಸ್ನೇಹಿತರಿಗೆ ಕೊಟ್ಟು ಶುಭಕೋರಿದರು. ಹಲವರನ್ನು ಮನೆಗಳಿಗೆ ಆಹ್ವಾನ ನೀಡಿ ವಿಶೇಷ ಭೋಜನ ಉಣಬಡಿಸಿದರು.

ತುಂಬಿ ತುಳುಕಿದ ಚರ್ಚ್‌ಸ್ಟ್ರೀಟ್‌

ಮಹಾತ್ಮಗಾಂಧಿ ರಸ್ತೆಗೆ ಹೊಂದಿಕೊಂಡಿರುವ ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ಸ್ಟ್ರೀಟ್‌ಗೆ ಯುವಜನರು ಭಾರಿ ಸಂಖ್ಯೆಯಲ್ಲಿ ಬಂದಿದ್ದರಿಂದ ಭಾರಿ ಜನದಟ್ಟಣೆ ಉಂಟಾಯಿತು. ಬೇರೆ ಬೇರೆ ಜಿಲ್ಲೆ ರಾಜ್ಯ ದೇಶಗಳಿಂದ ಬಂದು ಬೆಂಗಳೂರಿನಲ್ಲಿರುವ ಜನರು ಶನಿವಾರ ಭಾನುವಾರ ಚರ್ಚ್‌ಸ್ಟ್ರೀಟ್‌ ಬ್ರಿಗೇಡ್‌ ರಸ್ತೆಗಳಿಗೆ ಭೇಟಿ ನೀಡುತ್ತಾರೆ. ಈ ಬಾರಿ ಕ್ರಿಸ್‌ಮಸ್‌ ಪ್ರಯುಕ್ತ ಸೋಮವಾರವೂ ಸಂಖ್ಯೆ ಹೆಚ್ಚಾಗಿತ್ತು.

ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಸೋಮವಾರ ಕ್ರಿಸ್‌ಮಸ್ ಹಬ್ಬದ ಆಚರಣೆ ಅಂಗವಾಗಿ ಯುವತಿಯರು ಸೆಂಟಾ ಕ್ಲಾಸ್‌ ಹೇರ್‌ಬ್ಯಾಂಡ್‌ ಹಾಕಿಕೊಂಡು ಸಂಭ್ರಮಿಸಿದರು

ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌ನಲ್ಲಿ ಭಕ್ತರು ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು.

ಬ್ರಿಗೇಡ್ ರಸ್ತೆ ಬಳಿಯ ಸೇಂಟ್‌ ಪ್ಯಾಟ್ರಿಕ್ಸ್ ಚರ್ಚ್‌ನಲ್ಲಿ ಧರ್ಮಗುರುಗಳು ಪ್ರಾರ್ಥನೆ ನೆರೆವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.