ADVERTISEMENT

ಜೂನ್ 9ಕ್ಕೆ ನಾಗರಿಕ ಹಕ್ಕು ಸಂರಕ್ಷಣಾ ದಿನಾಚರಣೆ: ಮಾವಳ್ಳಿ ಶಂಕರ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:17 IST
Last Updated 2 ಜೂನ್ 2025, 14:17 IST
   

ಬೆಂಗಳೂರು: ‘ಬಿ. ಕೃಷ್ಣಪ್ಪ ಅವರ ಜನ್ಮದಿನದ ಪ್ರಯುಕ್ತ ಜೂನ್‌ 9ರಂದು ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ತಳಸಮುದಾಯಗಳ ಪರವಾಗಿ ಮಹಿಳೆಯರ ಹಾಗೂ ದಲಿತರ ಘನತೆಯ ಹಕ್ಕುಗಳ ರಕ್ಷಿಸಲು ಬಿ. ಕೃಷ್ಣಪ್ಪ ಅವರು ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ದಲಿತ ಚಳವಳಿಗಳನ್ನು ಗಟ್ಟಿಗೊಳಿಸಬೇಕು. ಕೃಷ್ಣಪ್ಪ ಅವರ ತ್ಯಾಗಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.  

‘ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವುದು, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸುವುದು, ಅನ್ಯಾಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಕಲ್ಪಿಸುವ ಉದ್ದೇಶದಿಂದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಪ್ರತ್ಯೇಕವಾಗಿ ವಿಶೇಷ ಪೊಲೀಸ್‌ ಠಾಣೆಗಳನ್ನು ಪ್ರಾರಂಭಿಸಿರುವುದು ಶ್ಲಾಘನೀಯ. ಈ ಪೊಲೀಸ್‌ ಠಾಣೆಗಳಿಗೆ ಮೂಲಸೌಕರ್ಯ, ಸಿಬ್ಬಂದಿ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು. 

ADVERTISEMENT

‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ ಬೇಡ ಜಂಗಮ–ಬುಡ್ಗ ಜಂಗಮ ಜಾತಿಗಳಿಗೂ ಮತ್ತು ವೀರಶೈವ ಜಗಮರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಬೇಡ ಜಂಗಮ ಹಾಗೂ ಬುಡ್ಗ ಜಂಗಮರು ಅಲೆಮಾರಿಗಳಾಗಿದ್ದು, ಮಾಂಸಾಹಾರಿಗಳಾಗಿದ್ದಾರೆ. ವೀರಶೈವ ಜಂಗಮರು ಸಸ್ಯಾಹಾರಿಗಳಾಗಿದ್ದಾರೆ. ವೀರಶೈವ ಜಂಗಮರು ಕೇವಲ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಲು ತಮ್ಮನ್ನು ಪರಿಶಿಷ್ಟ ಜಾತಿ ಎಂದು ಹೇಳಿಕೊಂಡು, ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.