ADVERTISEMENT

ರಾಯ್‌ ಆತ್ಮಹತ್ಯೆ| ಎಸ್‌ಐಟಿಯ ಮೊದಲ ಹಂತದ ತನಿಖೆ ಪೂರ್ಣ: ಮಾನಸಿಕ ಒತ್ತಡವೂ ಕಾರಣ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 23:35 IST
Last Updated 23 ಫೆಬ್ರುವರಿ 2026, 23:35 IST
ಸಿ.ಜೆ.ರಾಯ್
ಸಿ.ಜೆ.ರಾಯ್   

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮೊದಲ ಹಂತದ ತನಿಖೆ ಪೂರ್ಣಗೊಳಿಸಿದೆ. ರಾಯ್ ಅವರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಕಳೆದ 22 ದಿನಗಳಿಂದ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿರುವ ಎಸ್‌ಐಟಿ, ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡಿದ್ದ ಸ್ಥಳದಲ್ಲಿನ ಡಿವಿಆರ್, ಮೊಬೈಲ್, ಎಲೆಕ್ಟ್ರಾನಿಕ್ ಸಾಧನಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿದೆ. ಘಟನೆ ಕುರಿತು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿರುವ ಅಧಿಕಾರಿಗಳು, ತಾಂತ್ರಿಕ ಸಾಕ್ಷ್ಯಾಧಾರಗಳ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳದ ಐ.ಟಿ ಅಧಿಕಾರಿಗಳ ತಂಡ ನಾಲ್ಕು ಬಾರಿ ಕಾನ್ಫಿಡೆಂಟ್ ಗ್ರೂಪ್ ಸೇರಿ ಸಿ.ಜೆ.ರಾಯ್‌ಗೆ ಸಂಬಂಧಿಸಿದ ಅನೇಕ ಹಣಕಾಸು ವ್ಯವಹಾರದ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಸರ್ಕಾರಕ್ಕೆ ತೆರಿಗೆ ವಂಚನೆ ಆರೋಪದಿಂದಾಗಿ ರಾಯ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ತಜ್ಞ ವೈದ್ಯರ ಬಳಿ ಚಿಕಿತ್ಸೆ ಸಹ ಪಡೆಯುತ್ತಿದ್ದರು. ಮಾನಸಿಕ ಒತ್ತಡವು ಆತ್ಮಹತ್ಯೆಗೆ ಕಾರಣ ಇರಬಹುದು ಎಂಬುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಹಣ ಹೊಂದಿಸುವ ಒತ್ತಡದಲ್ಲಿದ್ದ ಕಾರಣ ರಾಯ್ ಅವರು ಮನೋವೈದ್ಯರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನ ಮೊದಲು ಜಯನಗರದ 8ನೇ ಬ್ಲಾಕ್‌ನಲ್ಲಿರುವ ಮನೋವೈದ್ಯಕೀಯ ಆಸ್ಪತ್ರೆಯ ಮನೋವೈದ್ಯರನ್ನು ಭೇಟಿ ಮಾಡಿ, ಒತ್ತಡ ನಿವಾರಣೆ ಸಂಬಂಧ ಚಿಕಿತ್ಸೆ, ಕೌನ್ಸೆಲಿಂಗ್ ಪಡೆದುಕೊಂಡಿದ್ದರು. ರಾಯ್ ಚಿಕಿತ್ಸೆ ಪಡೆದುಕೊಂಡಿದ್ದ ಮನೋವೈದ್ಯರಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ರಾಯ್‌ ಅವರು ಲ್ಯಾಂಗ್‌ಫೋರ್ಡ್‌ ರಸ್ತೆಯಲ್ಲಿರುವ ‘ಕಾನ್ಫಿಡೆಂಟ್ ಗ್ರೂಪ್‌’ನ ಕಚೇರಿಯಲ್ಲಿ ಜ.30ರಂದು ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.