
ಜಿಬಿಎ
ಬೆಂಗಳೂರು: ವಿಧಾನಸಭೆ ಕ್ಷೇತ್ರಗಳಲ್ಲಿ ಉತ್ತಮವಾಗಿ ಸ್ವಚ್ಛತಾ ಕಾರ್ಯ ನಡೆಸಲು, ನಗರ ಪಾಲಿಕೆಗಳ ಅಧಿಕಾರಿಗಳನ್ನು ಉತ್ತೇಜಿಸಲು ಸ್ಪರ್ಧೆ ಆಯೋಜಿಸಲಾಗಿದ್ದು, ಮೊದಲ ಬಹುಮಾನವಾಗಿ ₹1 ಲಕ್ಷ ಬಹುಮಾನ ನೀಡಲಾಗುತ್ತದೆ.
ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ‘ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ. ಉತ್ತಮವಾಗಿ ಕೆಲಸ ಮಾಡಿದವರನ್ನು ಗೌರವಿಸಲಾಗುತ್ತದೆ ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಹೇಳಿದರು.
ಉತ್ತರ ನಗರ ಪಾಲಿಕೆಯ ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ, ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳ ಒಟ್ಟು 93.9 ಕಿ.ಮೀ ರಸ್ತೆಗಳಲ್ಲಿ ತ್ಯಾಜ್ಯ, ಸಿಲ್ಟ್, ಕಟ್ಟಡ ತ್ಯಾಜ್ಯ ಹಾಗೂ ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವ ಜೊತೆಗೆ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನ.8ರಿಂದ ಕೈಗೊಳ್ಳಲಾಗುವುದು.
ಈ ಮಹಾ ಸ್ವಚ್ಛತಾ ಅಭಿಯಾನದಲ್ಲಿ ಪಾಲಿಕೆಯ ಘನತ್ಯಾಜ್ಯ, ಎಂಜಿನಿಯರಿಂಗ್ , ರಸ್ತೆ ಮೂಲಸೌಕರ್ಯ, ಆರೋಗ್ಯ ವಿಭಾಗ, ಸಂಚಾರ ಪೋಲಿಸ್, ತೋಟಗಾರಿಕೆ ವಿಭಾಗ, ಅರಣ್ಯ ವಿಭಾಗ, ಕೆರೆಗಳ ನಿರ್ವಹಣೆ ವಿಭಾಗ ಸೇರಿದಂತೆ ಇತರೆ ಇಲಾಖೆಗಳು ಹಾಗೂ ಸ್ಥಳೀಯ ಸಂಘಟನೆಗಳು ಪಾಲ್ಗೊಳ್ಳಲಿವೆ.
ಪಾಲಿಕೆ ಅಧಿಕಾರಿಗಳನ್ನು ಗುರುತಿಸಿ ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಉತ್ತಮವಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಮೊದಲ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಗರ ಪಾಲಿಕೆಯ ವತಿಯಿಂದ ಬಹುಮಾನಗಳನ್ನು ನೀಡಲಾಗುವುದು. ಉತ್ತಮವಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ವಿಧಾನಸಭಾ ಕ್ಷೇತ್ರಗಳನ್ನು ಎನ್‌ಜಿಒ / ಸಂಘ ಸಂಸ್ಥೆಗಳ ಮೂಲಕ ತಪಾಸಣೆ ಮಾಡಿಸಿ ಆಯ್ಕೆ ಮಾಡಲಾಗುವುದು ಎಂದು ಪೊಮ್ಮಲ ಸುನೀಲ್ ಕುಮಾರ್ ಮಾಹಿತಿ ನೀಡಿದರು.
ಮೊದಲ ಬಹುಮಾನ – ₹1 ಲಕ್ಷ, ಎರಡನೇ ಬಹುಮಾನ – ₹50 ಸಾವಿರ, ಮೂರನೇ ಬಹುಮಾನ – ₹25 ಸಾವಿರ ಇರುತ್ತದೆ. ಅಲ್ಲದೆ, ವಿಭಾಗವಾರು ಪ್ರತ್ಯೇಕ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ ಎಂದರು.
ನಗರದ ಸ್ವಚ್ಛತೆ ಕಾಪಾಡಲು ಪಾಲಿಕೆಯ ಸಿಬ್ಬಂದಿ ಪ್ರತಿದಿನ ಶ್ರಮಿಸುತ್ತಿದ್ದಾರೆ. ಉತ್ತಮವಾದ ಪರಿಸರವನ್ನು ನಿರ್ಮಿಸಲು ಹಾಗೂ ನಾಗರಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪಾಲಿಕೆಯು ಅನೇಕ ಕಾರ್ಯಕ್ರಮಗಳ ಮೂಲಕ ಹೆಜ್ಜೆ ಇರಿಸಿದೆ. ಈ ಪ್ರಯತ್ನದಲ್ಲಿ ನಾಗರಿಕರ ಸಹಭಾಗಿತ್ವ ಹಾಗೂ ಪ್ರೋತ್ಸಾಹ ಅಗತ್ಯವಿದೆ. ಸಾರ್ವಜನಿಕ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ನಿವಾರಿಸಲು ಜನರು ಕೈಜೋಡಿಸಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.