ADVERTISEMENT

ಸಿ.ಎಂ ಕಾರ್ಯದರ್ಶಿ ಕಾರು ಅಪಘಾತ

ಯಶವಂತಪುರ ಮೇಲ್ಸೇತುವೆಯಲ್ಲಿ ಘಟನೆ l ಆಟೊ, ಕ್ಯಾಂಟರ್ ಜಖಂ; ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 21:44 IST
Last Updated 31 ಡಿಸೆಂಬರ್ 2019, 21:44 IST
ಅಪಘಾತದಿಂದ ನಜ್ಜುಗುಜ್ಜಾದ ಕಾರು
ಅಪಘಾತದಿಂದ ನಜ್ಜುಗುಜ್ಜಾದ ಕಾರು   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯದರ್ಶಿ ಸೆಲ್ವಕುಮಾರ್ ಅವರ ಕಾರು ಯಶವಂತಪುರ ಮೇಲ್ಸೇತುವೆಯಲ್ಲಿ ಮಂಗಳವಾರ ಬೆಳಿಗ್ಗೆ ಅಪಘಾತಕ್ಕೀಡಾಗಿದ್ದು, ಚಾಲಕ ವಿನಯ್ ಸೇರಿ ಐವರು ಗಾಯಗೊಂಡಿದ್ದಾರೆ.

‘ಯಡಿಯೂರಪ್ಪ ಅವರು ಬೆಳಿಗ್ಗೆ 11ರ ಸುಮಾರಿಗೆ ಮನೆಯಿಂದ ಯಶವಂತಪುರ ಮಾರ್ಗವಾಗಿ ತುಮಕೂರಿನತ್ತ ಹೊರಟಿದ್ದರು. ಬೆಂಗಾವಲು ವಾಹನಗಳು ಅವರನ್ನು ಹಿಂಬಾಲಿಸುತ್ತಿದ್ದವು. ಅದೇ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದೆ’ ಎಂದು ಯಶವಂತಪುರ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಚಾಲಕ ವಿನಯ್ ಅತೀ ವೇಗವಾಗಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಡವಾಗಿದ್ದರಿಂದ ವೇಗದ ಚಾಲನೆ: ‘ಮುಖ್ಯಮಂತ್ರಿ ಅವರ ಕಾರಿನಲ್ಲೇ ಸೆಲ್ವಕುಮಾರ್ ಇದ್ದರು. ಆ ಕಾರು ಮುಂದಕ್ಕೆ ಹೊರಟಿತ್ತು. ಬೆಂಗಾವಲು ವಾಹನಗಳು ಹಿಂಬಾಲಿಸುತ್ತಿದ್ದವು. ಸೆಲ್ವಕುಮಾರ್ ಅವರ ಇನ್ನೋವಾ ಕಾರಿನಲ್ಲಿ ಚಾಲಕ ವಿನಯ್ ಮಾತ್ರ ಇದ್ದರು. ಅವರೂ ಬೆಂಗಾವಲು ವಾಹನಗಳ ಹಿಂದೆಯೇ ತೆರಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮುಖ್ಯಮಂತ್ರಿ ಅವರ ಕಾರು ಹಾಗೂ ಬೆಂಗಾವಲು ವಾಹನಗಳು ಯಶವಂತಪುರ ಮೆಟ್ರೊ ನಿಲ್ದಾಣ ಬಳಿ ಇದ್ದವು. ವಿನಯ್‌ ಅವರ ಕಾರು ಸಿ.ವಿ.ರಾಮನ್ ರಸ್ತೆಯಲ್ಲಿತ್ತು. ವಾಹನಗಳ ಅಂತರ ಹೆಚ್ಚಾಗಿದ್ದರಿಂದಾಗಿ ವಿನಯ್ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದರು. ಯಶವಂತಪುರ ಮೇಲ್ಸೇತುವೆ ಏರುತ್ತಿದ್ದಂತೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಅದನ್ನು ದಾಟಿ ಮುಂದಕ್ಕೆ ಸಾಗಿ ಎದುರಿಗೆ ಬರುತ್ತಿದ್ದ ಕ್ಯಾಂಟರ್ ಹಾಗೂ ಆಟೊಗೆ ಗುದ್ದಿತ್ತು. ಈ ಸಂಬಂಧ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಆಟೊ ಹಾಗೂ ಕ್ಯಾಂಟರ್‌ ಸಹ ಜಖಂಗೊಂಡಿದೆ.ಅಪಘಾತದಿಂದಾಗಿ ಚಾಲಕ ವಿನಯ್, ಆಟೊ ಚಾಲಕ ಹಾಗೂ ಕ್ಯಾಂಟರ್‌ ವಾಹನದಲ್ಲಿದ್ದ ಮೂವರಿಗೆ ಗಾಯ‌ವಾಗಿದೆ. ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ವಿನಯ್ ಸೀಟ್ ಬೆಲ್ಟ್‌ ಧರಿಸಿದ್ದರು. ಅಪಘಾತವಾಗುತ್ತಿದ್ದಂತೆ ಏರ್ ಬ್ಯಾಗ್ ತೆರೆದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಎದುರಿಗೆ ಕ್ಯಾಂಟರ್‌ ಬರದಿದ್ದರೆ ಕಾರು ಮೇಲ್ಸೇತುವೆಯಿಂದ ಕೆಳಗೆ ಬೀಳುವ ಅಪಾಯ ಇತ್ತು’ ಎಂದರು.

‘120 ಕಿ.ಮೀ.ಗಿಂತ ಹೆಚ್ಚಿನ ವೇಗ’
ಮೇಲ್ಸೇತುವೆಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ವೇಗದ ಚಾಲನೆಯೇ ಕಾರಣವೆಂಬುದು ತನಿಖೆ
ಯಿಂದ ಗೊತ್ತಾಗಿದೆ. ಹೀಗಾಗಿ, ಮೇಲ್ಸೇತುವೆಯಲ್ಲಿ ವೇಗದ ಮೀತಿಯನ್ನು 30 ಕಿ.ಮೀ/ಗಂಟೆಗೆ ನಿಗದಿಗೊಳಿಸಲಾಗಿದೆ’ ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದರು.

‘ಚಾಲಕ ವಿನಯ್‌, 100 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಕಾರು ಚಲಾಯಿಸಿದ್ದಾರೆ. ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ್ಕೆ ಕಾರು ಗುದ್ದಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.