ADVERTISEMENT

ಬೆಂಗಳೂರು:ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 14:07 IST
Last Updated 27 ಸೆಪ್ಟೆಂಬರ್ 2025, 14:07 IST
ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಬೆಂಗಳೂರು: ನಗರದ ಐಟಿಪಿಎಲ್ ರಸ್ತೆಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ಶೈಕ್ಷಣಿಕ ತರಗತಿಗಳ ಉದ್ಘಾಟನೆ ಮತ್ತು ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಸಿಎಂಆರ್‌ಐಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನಿವೃತ್ತ ಐಎಫ್‌ಎಸ್‌ ಅಧಿಕಾರಿ ಡಾ.ಎವಿಎಸ್ ರಮೇಶ್ ಚಂದ್ರ ಮತ್ತು ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷೆ ರಮ್ಯಾ ಹೆಮ್ಮಿಗೆ ವೆಂಕಟೇಶ್ ಉದ್ಘಾಟಿಸಿದರು.

ಡಾ.ಎವಿಎಸ್ ರಮೇಶ್ ಚಂದ್ರ ಮಾತನಾಡಿ, ‘ವಿದ್ಯಾರ್ಥಿಗಳು ಆತ್ಮನಿರ್ಭರ ಭಾರತ ಉಪಕ್ರಮವನ್ನು ಸರಿಯಾದ ನಿಟ್ಟಿನಲ್ಲಿ ಬಳಸಿಕೊಂಡು ಉದ್ಯಮಿಗಳಾಗಬೇಕು. ದೇಶದ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವ ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಶಿಸ್ತುಬದ್ಧ ಕಲಿಕೆ ಹಾಗೂ ಸಮಯ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದರು.

ADVERTISEMENT

ರಮ್ಯಾ ಹೆಮ್ಮಿಗೆ ವೆಂಕಟೇಶ್ ಮಾತನಾಡಿ, ‘ಶಿಕ್ಷಣ ಎಂಬುದು ಶಕ್ತಿಶಾಲಿ ಅಸ್ತ್ರ. ನಿರಂತರ ಕಲಿಕೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಬಹಳ ದೊಡ್ಡ ಸಾಧನ. ಹಾಗಾಗಿ ವಿದ್ಯಾರ್ಥಿಗಳು ಸೃಜನಶೀಲ ಚಿಂತನೆ, ನಾವೀನ್ಯದ ಕಡೆಗೆ ಒತ್ತು ನೀಡುವ ಮೂಲಕ ಗುರಿ ಮುಟ್ಟಬೇಕು’ ಎಂದು ಹೇಳಿದರು.

ಸಿಎಂಆರ್ ವಿಶ್ವವಿದ್ಯಾಲಯ ಮತ್ತು ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಸಿ.ರಾಮಮೂರ್ತಿ ಅವರು 2025-26ನೇ ಸಾಲಿನ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ, ಶೈಕ್ಷಣಿಕ, ಉದ್ಯಮಶೀಲತೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 126 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಿಎಂಆರ್ ಜ್ಞಾನಧಾರ ಟ್ರಸ್ಟ್ ಕಾರ್ಯದರ್ಶಿ ಡಾ.ಜಗನ್ನಾಥ ರೆಡ್ಡಿ, ಪ್ರಾಂಶುಪಾಲ ಡಾ.ಸಂಜಯ್ ಜೈನ್, ಉಪಪ್ರಾಂಶುಪಾಲ ಡಾ.ಬಿ.ನರಸಿಂಹ ಮೂರ್ತಿ, ಅಕಾಡೆಮಿ ಡೀನ್ ಗಳು, ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.