ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸದಲ್ಲಿ ಶನಿವಾರ ಮಧ್ಯಾಹ್ನ ನಾಗರಹಾವಿನ ಮರಿ ಪತ್ತೆಯಾಗಿದೆ.
ಸುಮಾರು ಒಂದೂವರೆ ಅಡಿ ಉದ್ದದ ಹಾವಿನ ಮರಿಯನ್ನು ಕಂಡು ಗಾಬರಿಗೊಂಡ ಸಿಬ್ಬಂದಿ, ಕೂಡಲೇ ವನ್ಯಜೀವಿ ತಜ್ಞ ಪ್ರಸನ್ನ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಬಂದ ಅವರು ಅದನ್ನು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಡಿ.ಕೆ. ಶಿವಕುಮಾರ್ ಅವರು ನಿವಾಸದಲ್ಲಿ ಇರಲಿಲ್ಲ. ಅದೃಷ್ಟವಶಾತ್ ಯಾರಿಗೂ, ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.
ಪ್ರಜಾವಾಣಿಯೊಂದಿಗೆ ಮಾತನಾಡಿದ ಪ್ರಸನ್ನ ಕುಮಾರ್, 'ಎರಡು ತಿಂಗಳ ಹಿಂದೆಯೂ ಇಲ್ಲಿ ಬೇರೊಂದು ಹಾವು ಪತ್ತೆಯಾಗಿತ್ತು' ಎಂದಿದ್ದಾರೆ.
'ಮಾನವ ವನ್ಯಜೀವಿ ಸಂಘರ್ಷದ ವಿಚಾರದಲ್ಲಿ ಜನರು ಹೆಚ್ಚಾಗಿ ಸಾವಿಗೀಡಾಗುತ್ತಿರುವುದು ಹಾವುಗಳ ಕಡಿತದಿಂದಲೇ. ಅಧಿಕೃತ ಮಾಹಿತಿ ಪ್ರಕಾರ, 2024ರಿಂದ ಈಚೆಗೆ ರಾಜ್ಯದಲ್ಲಿ ಸುಮಾರು 13,000ಕ್ಕೂ ಅಧಿಕ ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ, 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಂಗಾಂಗ ವೈಫಲ್ಯ ಸಮಸ್ಯೆಯೂ ಕಾಡುತ್ತಿದೆ' ಎಂದು ಹೇಳಿದ್ದಾರೆ.
ಹಾವು ಕಡಿತದ ಬಗ್ಗೆ ಜನರು ಎಚ್ಚರದಿಂದಿರಬೇಕು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಹಾವುಗಳ ರಕ್ಷಣೆಗೆ ಟಾಸ್ಕ್ ಫೋರ್ಸ್ ರಚಿಸಬೇಕು. ಸಹಾಯವಾಣಿ ಆರಂಭಿಸಬೇಕು.– ಪ್ರಸನ್ನ ಕುಮಾರ್, ವನ್ಯಜೀವಿ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.