ಕೊಕೇನ್ ತುಂಬಿದ್ದ ಕ್ಯಾಪ್ಸೂಲ್
(ಸಾಂದರ್ಭಿಕ ಚಿತ್ರ)
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕತಾರ್‌ನ ರಾಜಧಾನಿ ದೋಹಾದಿಂದ ಬಂದ ಪ್ರಯಾಣಿಕನ ಬಳಿ 4 ಕೆ.ಜಿ 6 ಗ್ರಾಂ ಕೊಕೇನ್ ಪತ್ತೆಯಾಗಿದ್ದು, ಆರೋಪಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಡಿಆರ್‌ಐನ ಬೆಂಗಳೂರು ವಿಭಾಗದ ಅಧಿಕಾರಿಗಳು ಶುಕ್ರವಾರ ರಾತ್ರಿ ದೋಹಾದಿಂದ ಬಂದ ಪ್ರಯಾಣಿಕರನ್ನು ಖಚಿತ ಮಾಹಿತಿ ಮೇರೆಗೆ ತಪಾಸಣೆಗೆ ಒಳಪಡಿಸಿದಾಗ ಆತನ ಬಳಿ ಅಪಾರ ಪ್ರಮಾಣದ ಕೊಕೇನ್ ಪತ್ತೆಯಾಗಿತ್ತು. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಯಿಂದ ವಶಪಡಿಸಿಕೊಂಡ ಕೊಕೇನ್‌ಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹40 ಕೋಟಿ ಬೆಲೆಯಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಯು ತನ್ನ ಲಗೇಜ್‌ನೊಂದಿಗೆ ಸೂಪರ್ ಹೀರೊಗಳ ಕಾಮಿಕ್ಸ್ ಪುಸ್ತಕವನ್ನು ಇರಿಸಿದ್ದ. ಪುಸ್ತಕದ ಹಾಳೆಗಳ ಮೇಲೆ ಕೊಕೇನ್‌ನ ಬಿಳಿ ಬಣ್ಣದ ಪುಡಿಯನ್ನು ಹಾಕಿಕೊಂಡು ಸಾಗಾಟ ಮಾಡುತ್ತಿದ್ದ. ಪುಸ್ತಕದ ಹಾಳೆಗಳ ಮೇಲಿದ್ದ ಬಿಳಿ ಪುಡಿ ಕಂಡು ಅನುಮಾನಗೊಂಡ ಅಧಿಕಾರಿಗಳು ಅದನ್ನು ಪರೀಕ್ಷಿಸಿದಾಗ, ಆ ಬಿಳಿ ಪುಡಿ ಕೊಕೇನ್ ಎಂದು ದೃಢಪಟ್ಟಿತ್ತು.
‘ಆರೋಪಿಯ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆ(ಎನ್‌ಡಿಪಿಎಸ್) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.