ಸಂತೆಯಲ್ಲಿ ಕಾಫಿ ಪ್ರಿಯರು ಕಾಫಿ ತಯಾರಿಕೆಯ ಪ್ರಾತ್ಯಕ್ಷಿಕೆ ವೀಕ್ಷಿಸಿದರು
-ಪ್ರಜಾವಾಣಿ ಚಿತ್ರ
ಬೆಂಗಳೂರು: ತರಹೇವಾರಿ ಕಾಫಿ ಪುಡಿಯ ಘಮ ಸ್ವಾತಂತ್ರ್ಯ ಉದ್ಯಾನವನ್ನು ಆವರಿಸಿಕೊಂಡಿದ್ದರೆ, ಕಾಫಿ ಪ್ರಿಯರು ತಮ್ಮಿಷ್ಟದ ಕಾಫಿಯನ್ನು ಸವಿದು ಆಸ್ವಾದಿಸಿದರು.
ಮಹಿಳಾ ಕಾಫಿ ಅಲಯನ್ಸ್–ಇಂಡಿಯಾ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಕಾಫಿ ಸಂತೆಗೆ ನಗರದಲ್ಲಿ ಶುಕ್ರವಾರ ಚಾಲನೆ ದೊರೆಯಿತು. ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಜಗದೀಶ್ ಅವರು ಈ ಸಂತೆ ಉದ್ಘಾಟಿಸಿದರು. ಕಾಫಿ ತೋಟಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಸಬಲೀಕರಣ ಹಾಗೂ ಅವರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸಂತೆ ಹಮ್ಮಿಕೊಳ್ಳಲಾಗಿದೆ.
ಮೇಳದಲ್ಲಿ 40 ಮಳಿಗೆಗಳಿದ್ದು, 20ಕ್ಕೂ ಅಧಿಕ ಬಗೆಯ ಕಾಫಿ ಪುಡಿಗಳು ಮಾರಾಟಕ್ಕಿದ್ದವು. ಮನೆ ಹಾಗೂ ವಾಣಿಜ್ಯ ಬಳಕೆಗೆ ಸಹಕಾರಿಯಾದ ಕಾಫಿ ಯಂತ್ರಗಳನ್ನೂ ಪ್ರದರ್ಶನಕ್ಕೆ ಇರಿಸಲಾಗಿತ್ತು. ಕಾಫಿ ಪ್ರಿಯರು ಸ್ಥಳದಲ್ಲಿಯೇ ಸಿದ್ಧಪಡಿಸುತ್ತಿದ್ದ ಕಾಫಿಯನ್ನು ಸವಿದು, ಕಾಫಿ ಪುಡಿಯನ್ನೂ ಖರೀದಿಸಿದರು.
ಮಳಿಗೆಗಳ ನಡುವೆ ಬೆಂಚುಗಳನ್ನೂ ಇರಿಸಲಾಗಿತ್ತು. ಕುರುಕಲು ತಿಂಡಿಗಳ ಮಳಿಗೆಗಳೂ ಸಂತೆಯಲ್ಲಿದ್ದವು. ಕಾಫಿ ಉದ್ಯಮದಲ್ಲಿ ಇರುವವರು ಇದರ ಮಾರುಕಟ್ಟೆ ಬಗ್ಗೆಯೂ ಆಸಕ್ತರಿಗೆ ಮಾಹಿತಿ ಒದಗಿಸಿದರು. ವಿವಿಧ ಬ್ರ್ಯಾಂಡ್‌ಗಳ ಕಾಫಿ ಮಳಿಗೆಗಳೂ ಸಂತೆಯಲ್ಲಿದ್ದವು. ಸಂಗೀತ ಕಾರ್ಯಕ್ರಮದ ಜತೆಗೆ ರಸಪ್ರಶ್ನೆ ಸೇರಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
‘ವಿವಿಧ ಬಗೆಯ ಗುಣಮಟ್ಟದ ಕಾಫಿ ಪುಡಿಯನ್ನು ಒಂದೇ ಸೂರಿನಡಿ ತರಲಾಗಿದೆ. ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ಸಂತೆ ನಡೆಯಲಿದೆ’ ಎಂದು ಮಹಿಳಾ ಕಾಫಿ ಅಲಯನ್ಸ್–ಇಂಡಿಯಾದ ಕಾರ್ಯದರ್ಶಿ ಪೂರ್ಣಿಮಾ ಜೈರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.