ADVERTISEMENT

ಭ್ರಷ್ಟಾಚಾರದ ಕಳಂಕದಿಂದ ಹೊರಗೆ ಬನ್ನಿ: BDA ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ್‌ ತಾಕೀತು

ಡಿ–ನೋಟಿಫಿಕೇಶನ್‌ ಮಾಡದಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 20:02 IST
Last Updated 29 ಮೇ 2023, 20:02 IST
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿದರು. ಆಯುಕ್ತ ಕುಮಾರ್‌ನಾಯಕ್‌ ಇದ್ದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿದರು. ಆಯುಕ್ತ ಕುಮಾರ್‌ನಾಯಕ್‌ ಇದ್ದರು.   

ಬೆಂಗಳೂರು: ‘ಬಿಡಿಎಗೆ ಭ್ರಷ್ಟಾಚಾರ ಕಳಂಕ ಸುತ್ತಿಕೊಂಡಿದ್ದು, ಆ ಹಣೆಪಟ್ಟಿಯಿಂದ ಹೊರಗೆ ತರಬೇಕು’‌ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಾಕೀತು ಮಾಡಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಅವರು, ‘ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಕೆಲಸ ನಡೆಸಬೇಕು. ಬಿಡಿಎ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ಡಿ–ನೋಟಿಫಿಕೇಶನ್ ಮಾಡುವಂತಿಲ್ಲ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕೇವಲ ಅಧಿಸೂಚನೆ ಹೊರಡಿಸಿದರೆ ಸಾಲದು. ಅದಕ್ಕೆ ತಕ್ಕಂತೆ ಕಾಮಗಾರಿ ಗಡುವಿನ ಒಳಗಾಗಿ ಪೂರ್ಣಗೊಳಿಸಬೇಕು. ನಗರದಲ್ಲಿ ವಾಹನ ಸಂಚಾರ ದಟ್ಟಣೆ ವಿಪರೀತವಾಗಿದೆ. ಅದರ ಸುಧಾರಣೆಗೆ ಮೊದಲು ಕ್ರಮ ಕೈಗೊಳ್ಳಬೇಕು. ಅಗತ್ಯ ಸ್ಥಳಗಳಲ್ಲಿ ರಸ್ತೆಗಳ ವಿಸ್ತರಣೆ ಮಾಡಬೇಕು. ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಸರಿಯಾದ ಪರಿಹಾರ ವಿತರಣೆ ಮಾಡಬೇಕು’ ಎಂದು ಸೂಚಿಸಿದರು.

ADVERTISEMENT

‘ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಬೇಕು. 73.40 ಕಿ.ಮೀ ಉದ್ದದ ಪೆರಿಫೆರಲ್ ವರ್ತುಲ ರಸ್ತೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು’ ಎಂದು ಸೂಚಿಸಿದರು.

‘ಬಿಡಿಎನಲ್ಲಿ ಭ್ರಷ್ಟಾಚಾರ ನಿಲ್ಲಬೇಕು. ಮುಂದೆ ಭ್ರಷ್ಟಾಚಾರ ನಡೆದರೆ ಅದನ್ನು ಸಹಿಕೊಂಡು ಕೂರುವುದಿಲ್ಲ. ನಗರದ ಅಭಿವೃದ್ಧಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತೇನೆ. ಅಧಿಕಾರಿಗಳೂ ಅದಕ್ಕೆ ಬದ್ಧವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು. ಬಿಡಿಎ ಆಯುಕ್ತ ಕುಮಾರ್‌ನಾಯಕ್‌ ಹಾಜರಿದ್ದರು.

ಬಿಡಿಎನಲ್ಲಿ ದೊಡ್ಡಮಟ್ಟದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ನಗರದ ಅಭಿವೃದ್ಧಿಗೆ ಯಾವೆಲ್ಲ ಬದಲಾವಣೆಗಳನ್ನು ತರಬೇಕು ಎಂಬುದನ್ನು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿ
ಬೆಳೆ ನಾಶ: ಸಿಗದ ಪರಿಹಾರ
‘ಫೆ.24ರಂದು ರೈತರಿಗೆ ಯಾವುದೇ ನೋಟಿಸ್‌ ನೀಡದೇ ಪೊಲೀಸರೊಂದಿಗೆ ಆಗಮಿಸಿ ಬೆಳೆಗಳನ್ನು ನಾಶ ಪಡಿಸಿದ್ದರು. ಇದರಿಂದ ಜಾನುವಾರುಗಳಿಗೂ ಮೇವು ಇಲ್ಲವಾಗಿದೆ. ಜಾನುವಾರುಗಳಿಗೆ ಮೇವು ಒದಗಿಸಲೂ ಪರಿಹಾರ ನೀಡಿಲ್ಲ’ ಎಂದು ಅಳಲು ತೋಡಿಕೊಂಡರು. ‘ಈ ಭಾಗದಲ್ಲಿ ರೈತರು ಹೈನುಗಾರಿಕೆಯನ್ನೇ ಅಲವಲಂಬಿಸಿದ್ದಾರೆ. ರೈತರಿಗೆ ಪುನರ್ವಸತಿ ಕಲ್ಪಿಸದೇ ಬೆಳೆಗಳನ್ನು ನಾಶ ಪಡಿಸಲಾಗಿದೆ. ಜಾನುವಾರುಗಳಿಗೆ ಬೆಳೆದ ಮೇವು ನಾಶ ಪಡಿಸುವುದು ನ್ಯಾಯಾಲಯ ಆದೇಶದ ಉಲ್ಲಂಘನೆ’ ಎಂದು ಸಂತ್ರಸ್ತರು ಕಣ್ಣೀರು ಹಾಕಿದರು.
ಬೆಳೆದ ಫಸಲು ಕಾಪಾಡಿಕೊಳ್ಳಲು ಮುಂದಾಗಿದ್ದಕ್ಕೆ ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಲ್ಲ ಪ್ರಕರಣಗಳನ್ನೂ ವಾಪಸ್‌ ಪಡೆಯಬೇಕು.
ಎಂ.ರಮೇಶ್ ರಾಮಗೊಂಡನಹಳ್ಳಿ
ಡಾ.ಶಿವರಾಮ ಕಾರಂತ ಬಡಾವಣೆ: ಅಭಿವೃದ್ಧಿಪಡಿಸಿದ ಶೇ 60 ಭೂಮಿಗೆ ಪಟ್ಟು  
ಡಾ.ಶಿವರಾಮ ಕಾರಂತ ಬಡಾವಣೆಗೆ ಕೃಷಿ ಜಮೀನು ಕಳೆದುಕೊಂಡಿರುವ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆ ಅಂತೆಯೇ ಭೂಪರಿಹಾರ ನೀಡಬೇಕು ಅಥವಾ ಅಭಿವೃದ್ಧಿಪಡಿಸಿದ ಶೇ 60ರಷ್ಟು ಭೂಮಿ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೈತರು ಡಿ.ಕೆ.ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು. ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು. ತಕ್ಷಣವೇ ಜಾನುವಾರುಗಳು ಕುರಿ–ಮೇಕೆಗಳಿಗೆ ಮೇವು ಒದಗಿಸಬೇಕು ಎಂದು ಆಗ್ರಹಿಸಿದರು. ರೈತ ಕುಟುಂಬಗಳಿಗೆ ತಮ್ಮ ಜೀವನ ನಿರ್ವಹಣೆ ಮಕ್ಕಳ ವಿದ್ಯಾಭ್ಯಾಸ ವೃದ್ಧರ ಆರೋಗ್ಯ ತಪಾಸಣೆ ದೈನಂದಿನ ಬದುಕಿಗಾಗಿ ಯೋಜನೆ ಪೂರ್ಣಗೊಳ್ಳುವ ತನಕ ಮಾಸಾಶನ ನೀಡಬೇಕು ಎಂದು ಸಂತ್ರಸ್ತರು ಕೋರಿದರು. ಯೋಜನೆ ಮಂಜೂರಾತಿಗೆ ಬಿಡಿಎ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 2013ರ ಭೂಸ್ವಾಧೀನ ಕಾಯ್ದೆ ಅಡಿಯಲ್ಲೇ ಭೂಪರಿಹಾರ ನೀಡಲಾಗುವುದು ಹೇಳಿತ್ತು. ಅದೇ ಪ್ರಸ್ತಾವಕ್ಕೆ ಸರ್ಕಾರವು ಒಪ್ಪಿಗೆ ಸಹ ನೀಡಿತ್ತು. ರಾಜ್ಯಪತ್ರದಲ್ಲೂ ಅದೇ ಅಂಶವಿದೆ. 2018ರಿಂದ 2020ರ ತನಕ ಜಾರಿ ಮಾಡಿರುವ ನೋಟಿಸ್‌ಗಳಲ್ಲೂ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ 2021ರ ಈಚೆಗೆ 1894ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನೀಡುತ್ತೇವೆಂದು ಹೇಳಿ ರೈತರನ್ನು ಬಿಡಿಎ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ರಾಮಗೊಂಡನಹಳ್ಳಿ ಎಂ.ರಮೇಶ್‌ ಅವರು ಸಚಿವರ ಎದುರು ಅಳಲು ತೋಡಿಕೊಂಡರು. ಸುಪ್ರೀಂ ಕೋರ್ಟ್‌ ನೇಮಿಸಿರುವ ಸಮಿತಿಯ ಉಸ್ತುವಾರಿಯಲ್ಲಿ ರೈತರ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿಗೊಳ್ಳಬೇಕಿತ್ತು. ಬಿಡಿಎ ಅಧಿಕಾರಿಗಳು ರೈತರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದ ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.