ADVERTISEMENT

ಆಮ್ಲಜನಕ ಸೌಲಭ್ಯವುಳ್ಳ 2,400 ಹಾಸಿಗೆ: ಸಚಿವ ವಿ.ಸೋಮಣ್ಣ

ಪೂರ್ವ ವಲಯ, ಗೋವಿಂದರಾಜನಗರ ಕ್ಷೇತ್ರದ ಕೋವಿಡ್‌ ಉಸ್ತುವಾರಿ

​ಪ್ರಜಾವಾಣಿ ವಾರ್ತೆ
Published 10 ಮೇ 2021, 21:57 IST
Last Updated 10 ಮೇ 2021, 21:57 IST
ಸಚಿವ ವಿ.ಸೋಮಣ್ಣ
ಸಚಿವ ವಿ.ಸೋಮಣ್ಣ    

ಬೆಂಗಳೂರು: ‘ಬೆಂಗಳೂರಿನ 15 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಮ್ಲಜನಕ ಸೌಲಭ್ಯವಿರುವ 2,400 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಇನ್ನೂ 700 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ಪೂರ್ವ ವಲಯ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕೋವಿಡ್‌ ಉಸ್ತುವಾರಿಯಾಗಿರುವ ಅವರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸೋಮವಾರ ಸಭೆ ನಡೆಸಿ ಚರ್ಚಿಸಿದರು.

‘ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಒದಗಿಸಲು ಮೊದಲ ಆದ್ಯತೆ ನೀಡಲಾಗಿದೆ. ಇದರಿಂದ ರೋಗಿಗಳ ಪ್ರಾಣ ಉಳಿಯಲಿದೆ. ನಗರದ ವಿವಿಧ ಭಾಗಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದ್ದು ಅಲ್ಲಿ ಆಮ್ಲಜನಕ ಸೌಲಭ್ಯವಿರುವ 30 ರಿಂದ 50 ಹಾಸಿಗೆಗಳನ್ನು ಒದಗಿಸಲಾಗಿದೆ. ಜೊತೆಗೆ ವೆಂಟಿಲೇಟರ್‌ಗಳನ್ನೂ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಆತಂಕಕ್ಕೊಳಗಾಗಬಾರದು’ ಎಂದರು.

ADVERTISEMENT

ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಶಾಸಕರಾದ ರಿಜ್ವಾನ್ ಅರ್ಷದ್, ಭೈರತಿ ಸುರೇಶ್, ಎನ್.ಎ.ಹ್ಯಾರಿಸ್, ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಇದ್ದರು.

ಶವಸಂಸ್ಕಾರ: ತಪ್ಪದ ಪರದಾಟ
ಬೆಂಗಳೂರು:
ನಗರದಲ್ಲಿ ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಹೀಗಾಗಿ ಮೃತರ ಸಂಬಂಧಿಕರು ಶವ ಸಂಸ್ಕಾರಕ್ಕೆ ಪರದಾಡುವುದು ಮುಂದುವರಿದಿದೆ.

ಆಂಬುಲೆನ್ಸ್‌ ಸಿಗದ ಕಾರಣ ವ್ಯಕ್ತಿಯೊಬ್ಬರು ತಾಯಿಯ ಶವವನ್ನು ಇನೊವಾ ಕಾರಿನಲ್ಲೇ ತಂದಿದ್ದ ದೃಶ್ಯ ಲಕ್ಷ್ಮೀಪುರದ ಮೇಡಿ ಅಗ್ರಹಾರ ಚಿತಾಗಾರದ ಎದುರು ಕಂಡುಬಂದಿತ್ತು. ತಾಯಿಗೆ ಸೋಂಕು ತಗುಲಿದ್ದರಿಂದ ಅವರಿಗೆ ಚಿಕಿತ್ಸೆ ಕೊಡಿಸಲು ಅವರು ಹಲವು ಆಸ್ಪತ್ರೆಗಳಿಗೆ ಅಲೆದಿದ್ದರು. ಆಮ್ಲಜನಕದ ಹಾಸಿಗೆ ಸಿಗದ ಕಾರಣ ವೃದ್ಧೆ ಮೃತಪಟ್ಟಿದ್ದರು.

ಇಂತಹ ಮನಕಲಕುವ ಹಲವು ದೃಶ್ಯಗಳು ನಗರದಲ್ಲಿ ಕಂಡುಬಂದವು. ಪ್ರಮುಖ ಚಿತಾಗಾರಗಳ ಎದುರು ಹಿಂದೆಂದಿಗಿಂತಲೂ ಹೆಚ್ಚು ಆಂಬುಲೆನ್ಸ್‌ಗಳು ಸಾಲುಗಟ್ಟಿ ನಿಂತಿದ್ದವು. ಆಪ್ತರನ್ನು ಕಳೆದುಕೊಂಡ ದುಃಖದ ನಡುವೆಯೂ ಕೆಲವರು ಸಾವಧಾನದಿಂದ ತಮ್ಮ ಸರದಿಗಾಗಿ ಕಾಯುತ್ತಿದ್ದರು. ಮತ್ತೆ ಕೆಲವರು ಚಿತಾಗಾರದ ಹೊರಭಾಗದಲ್ಲೇ ಅಂತಿಮ ವಿಧಿ ವಿಧಾನ ಪೂರೈಸಿ ಭಾರವಾದ ಮನಸ್ಸಿನಿಂದಲೇ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಗಿಡ್ಡೇನಹಳ್ಳಿ ಹಾಗೂ ತಾವರೆಕೆರೆಯಲ್ಲಿ ಆರಂಭಿಸಲಾಗಿರುವ ಚಿತಾಗಾರಗಳ ಎದುರು ಆಂಬುಲೆನ್ಸ್‌ಗಳ ಸಾಲು ಹೆಚ್ಚು ಕಂಡುಬಂತು. ಈ ಚಿತಾಗಾರಗಳಲ್ಲಿ ಒಟ್ಟು 120 ಶವಗಳನ್ನು ಸುಡಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಹೆಚ್ಚುವರಿಯಾಗಿ ಇನ್ನೂ 27 ಆಂಬುಲೆನ್ಸ್‌ಗಳು ಹೊರಭಾಗದಲ್ಲಿ ಸಾಲಾಗಿ ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.