ADVERTISEMENT

ಅನಧಿಕೃತ ಶಾಲೆ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:18 IST
Last Updated 3 ಫೆಬ್ರುವರಿ 2019, 19:18 IST

ಬೆಂಗಳೂರು: ‘ಕುಮಾರಸ್ವಾಮಿ ಲೇಔಟ್‌ ಸಮೀಪದ ಉಮರ್ ಬಾಗ್ ಬಡಾವಣೆಯಲ್ಲಿರುವ ಫಿರ್ದೋಸ್ ಇಂಟರ್‌ನ್ಯಾಷನಲ್ ಶಾಲೆ ಅನಧಿಕೃತವಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದುಶಂಕರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜೇಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

‌‘ಶಾಲೆಯ ಬಗ್ಗೆ ಆಂತರಿಕ ತನಿಖೆ ನಡೆಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲೆಯು ಅನಧಿಕೃತವೆಂಬುದನ್ನು ಪತ್ತೆ ಹಚ್ಚಿ ದೂರು ನೀಡಿದ್ದಾರೆ. ಅದರನ್ವಯ ವಂಚನೆ (ಐಪಿಸಿ 420), ಶಿಕ್ಷಣ ಕಾಯ್ದೆ ಹಾಗೂ ಆರ್‌ಟಿಇ ಕಾಯ್ದೆ ಅಡಿ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಫಿರ್ದೋಸ್ ಇಂಟರ್‌ನ್ಯಾಷನಲ್ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕರು, ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಶಾಲೆ ಆರಂಭಿಸಿದ್ದಾರೆ. ಅದನ್ನು ಪತ್ತೆ ಹಚ್ಚಿದ್ದ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳು (ಸಿಆರ್‌ಪಿ) ಶಾಲೆಗೆ ನೋಟಿಸ್‌ ಕೊಟ್ಟಿದ್ದರು. ಅಷ್ಟಾದರೂ ಶಾಲೆಯನ್ನು ಮುಂದುವರಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ನಿಯಮಗಳನ್ನು ಉಲ್ಲಂಘಿಸಿ ಶಾಲೆ ನಡೆಸುವ ಮೂಲಕ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರು, ಇಲಾಖೆಗೆ ಮೋಸ ಮಾಡಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಪೋಷಕರಿಗೂ ವಂಚಿಸುತ್ತಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.