
ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕನ ಯಡವಟ್ಟಿನಿಂದ ಎರಡು ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕುಂದಲಹಳ್ಳಿಯ ನಿವಾಸಿ ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ ಪ್ರಣವ್ ಮೃತಪಟ್ಟಿದ್ದಾನೆ.
ಲಾರಿ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಅವಘಡದಲ್ಲಿ ಗೋಡೆ ಕುಸಿದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.
‘ಹೊಸ ಮನೆಯೊಂದರ ಮೊಲ್ಡಿಂಗ್ ಕೆಲಸಕ್ಕಾಗಿ ಕಾಂಕ್ರೀಟ್ ಮಿಕ್ಸರ್ ಲಾರಿಯನ್ನು ಕರೆಸಲಾಗಿತ್ತು. ಶುಕ್ರವಾರ ಸಂಜೆ 4ರ ಸುಮಾರಿಗೆ ಕೆಲಸ ಮುಗಿದಿತ್ತು. ಕಿರಿದಾದ ಮಾರ್ಗದಲ್ಲಿ ಲಾರಿ ತೆರಳುತ್ತಿರುವಾಗ ಮೇಲ್ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯು ಲಾರಿಗೆ ಸಿಲುಕಿಕೊಂಡಿತ್ತು. ಅದನ್ನು ಗಮನಿಸದೇ ಲಾರಿ ಚಾಲಕ ವಾಹನವನ್ನು ಮುಂದಕ್ಕೆ ಕೊಂಡೊಯ್ದ. ಆಗ ವಿದ್ಯುತ್ ಕಂಬ ಕಿತ್ತುಕೊಂಡು, ಮನೆಯೊಂದರ ಗೋಡೆಗೆ ತಾಗಿತ್ತು. ಗೋಡೆ ಪಕ್ಕದಲ್ಲೇ ಆಟವಾಡುತ್ತಿದ್ದ ಮಗುವಿನ ಮೇಲೆ ಗೋಡೆಯ ಅವಶೇಷಗಳು ಬಿದ್ದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ’ ಎಂದು ಪೊಲೀಸರು ಹೇಳಿದರು.
‘ಘಟನೆಗೂ ಎರಡು ನಿಮಿಷಗಳ ಮುನ್ನ ಪುತ್ರನ ಜತೆಗೆ ತಂದೆ ಸಿದ್ದಪ್ಪ ಮನೆಯ ಆವರಣದಲ್ಲೇ ಆಟವಾಡುತ್ತಿದ್ದರು. ಮಗುವನ್ನು ಅಲ್ಲೇ ಬಿಟ್ಟು ಕ್ಯಾನ್‌ನಲ್ಲಿ ನೀರು ತರಲು ಮನೆಯ ಒಳಕ್ಕೆ ತೆರಳಿದ್ದರು. ಆಗ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.