ADVERTISEMENT

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ: ಕಾಂಗ್ರೆಸ್‌ ‘ಸ್ವಾತಂತ್ರ್ಯ ನಡಿಗೆ’ ಇಂದು

ಭಾಗವಹಿಸುವವರಿಗೆ ಉಚಿತ ಮೆಟ್ರೊ ಪ್ರಯಾಣದ ವ್ಯವಸ್ಥೆ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 8:40 IST
Last Updated 15 ಆಗಸ್ಟ್ 2022, 8:40 IST
   

ಬೆಂಗಳೂರು: ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಸೋಮವಾರ (ಆಗಸ್ಟ್‌ 15) ಹಮ್ಮಿಕೊಂಡಿರುವ ‘ಸ್ವಾತಂತ್ರ್ಯ ನಡಿಗೆ’ಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾರ್ವಜನಿಕರಿಗೆ ಪಕ್ಷದ ವತಿಯಿಂದ ಉಚಿತ ಮೆಟ್ರೊ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ನಡಿಗೆ ಆರಂಭವಾಗಿ ಬಸವನಗುಡಿ ನ್ಯಾಷನಲ್‌ ಮೈದಾನದವರೆಗೆ (ಕೆ.ಆರ್‌.ವೃತ್ತ, ಟೌನ್‌ಹಾಲ್‌, ಮಿನರ್ವ ವೃತ್ತ ಮೂಲಕ) 7.5 ಕಿ.ಮೀ ಸಾಗಲಿದೆ. ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರ ನೇತೃತ್ವದಲ್ಲಿ ಸಿದ್ಧತೆ ಪೂರ್ಣಗೊಂಡಿದೆ.

ADVERTISEMENT

75 ಸಾವಿರಕ್ಕೂ ಹೆಚ್ಚು ಜನರು ನಡಿಗೆಯಲ್ಲಿ ಹೆಜ್ಜೆ ಹಾಕಲು ನೋಂದಣಿ ಮಾಡಿಕೊಂಡಿದ್ದಾರೆ. ನಡಿಗೆಯಲ್ಲಿ ಹೆಜ್ಜೆ ಹಾಕುವ ಎಲ್ಲರಿಗೂ ಟಿ ಶರ್ಟ್, ಕ್ಯಾಪ್, ಕಿಟ್ ವಿತರಿಸಲು ಉದ್ದೇಶಿಸಲಾಗಿದೆ. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ‌ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಯಾವುದೇ ರಾಜಕೀಯ ಭಾಷಣಕ್ಕೆ ಇರುವುದಿಲ್ಲ ಅವಕಾಶ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಲಿದ್ದು, ಹರಿಹರನ್, ಸಾಧುಕೋಕಿಲ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಮೆಟ್ರೊ ಟಿಕೆಟ್‌: ‘ನಾವು ಪಕ್ಷದ ವತಿಯಿಂದ ಮೆಟ್ರೊಗೆ ಹಣ ಪಾವತಿಸಿ ಟಿಕೆಟ್ ಖರೀದಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಬೆಂಗಳೂರಿಗೆ ವಿವಿಧ ಭಾಗಗಳಿಂದ ಬರುವವರು ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬರಲು ಹಾಗೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯದ ನಂತರ ಹಿಂದಿರುಗಲು ಮೆಟ್ರೊ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ’ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಖಂಡನೀಯ: ‘ಸ್ವಾತಂತ್ರ್ಯ ಹೋರಾಟ ಗಾರ ಟಿಪ್ಪು ಸುಲ್ತಾನ್ ಅವರ ಕಟ್ ಔಟ್ ಅನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ.ಪೊಲೀಸರು ಇರುವಾಗಲೇ ಹರಿದಿದ್ದಾರೆ.

ಈ ಬಗ್ಗೆ ಪೊಲೀಸ್ ಅಧಿಕಾರಿಗಳಜತೆ ಚರ್ಚಿಸಿದ್ದೇನೆ. ಕೃತ್ಯ ಯಾರು ಎಸಗಿದ್ದಾರೆ ಎನ್ನುವುದು ಗೊತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಪುರಾತತ್ವ ಇಲಾಖೆ ಅಡಿಯಲ್ಲಿ ಟಿಪ್ಪು ಸುಲ್ತಾನ್ ಅರಮನೆ ಇದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗು್ತದೆ. ಆದರೂ ಇಂಥ ಘಟನೆಗಳು ನಡೆಯುತ್ತಿರುವುದು ನೋವು ತಂದಿದೆ’ ಎಂದರು.

ಟಿಪ್ಪು ಅವರ ಸ್ಮರಣೆ ಅಲ್ಪಸಂಖ್ಯಾತರ ಓಲೈಕೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸ್ವಾತಂತ್ರ್ಯಕ್ಕಾಗಿ ಎಲ್ಲ ಸಮುದಾಯದವರೂ ಹೋರಾಟ ಮಾಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ವಿಚಾರ ಹೋರಾಟಗಾರರಲ್ಲಿ ಇತ್ತು, ಜಾತಿ ಧರ್ಮದ ವಿಚಾರ ಅಲ್ಲ’ ಎಂದರು.

ವಾಹನ ನಿಲುಗಡೆ ವ್ಯವಸ್ಥೆ
ಬೆಂಗಳೂರು: ‘ತುಮಕೂರು ರಸ್ತೆಯಿಂದ (ಬೆಳಗಾವಿ, ಬಾಗಲಕೋಟೆ, ಹಾವೇರಿ, ಬೀದರ್, ಹುಬ್ಬಳ್ಳಿ-ಧಾರವಾಡ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಬಿಜಾಪುರ, ರಾಯಚೂರು, ವಿಜಯನಗರ, ಶಿವಮೊಗ್ಗ) ನಗರಕ್ಕೆ ಬರುವವರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ (ಬಿಐಇಸಿ) ಆವರಣದಲ್ಲಿ ವಾಹನ ನಿಲುಗಡೆ ಮಾಡಬಹುದು. ನಾಗಸಂದ್ರ ಮೆಟ್ರೊ ನಿಲ್ದಾಣದಿಂದ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣಕ್ಕೆ ಬಂದು ನಡಿಗೆಯಲ್ಲಿ ಪಾಲ್ಗೊಳ್ಳಬಹುದು’ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.

‘ಮೈಸೂರು ರಸ್ತೆಯಿಂದ (ರಾಮನಗರ, ಕೊಡಗು, ಮೈಸೂರು, ಚಾಮರಾಜನಗರ) ಬರುವವರು, ಕೆಂಗೇರಿ ಬಳಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಬಳಿ ವಾಹನ ನಿಲ್ಲಿಸಬಹುದು. ಅಲ್ಲಿಂದ ಮೆಜೆಸ್ಟಿಕ್‌ಗೆ ಮೆಟ್ರೊದಲ್ಲಿ ಬರಬಹುದು. ಕನಕಪುರ ರಸ್ತೆ ಮಾರ್ಗವಾಗಿ ಬರುವವರು ಕೋಣನಕುಂಟೆ ಮೆಟ್ರೊ ನಿಲ್ದಾಣದ ಮೂಲಕ ಮೆಜೆಸ್ಟಿಕ್ ತಲುಪಬಹುದು. ಕೆ.ಆರ್. ಪುರ ಕಡೆಯಿಂದ ಬರುವವರು ಐಟಿಐ ಮೈದಾನದಲ್ಲಿ ವಾಹನ ನಿಲ್ಲಿಸಿ, ಬೈಯಪ್ಪನಹಳ್ಳಿ ಮೆಟ್ರೊ ಮೂಲಕ ಬರಬಹುದು’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.