ADVERTISEMENT

ಎಸ್‌. ನಿಜಲಿಂಗಪ್ಪ ಮನೆ ಸ್ವಾಧೀನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 14:41 IST
Last Updated 8 ಆಗಸ್ಟ್ 2023, 14:41 IST
   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರ ಮನೆಯನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದು, ಸಂರಕ್ಷಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕಾಂಗ್ರೆಸ್‌ ಮುಖಂಡ ಮೋಹನ್‌ ಕುಮಾರ್‌ ಕೊಂಡಜ್ಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ನಿಜಲಿಂಗಪ್ಪ ಅವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನಿಜಲಿಂಗಪ್ಪ ಪ್ರತಿಮೆಗೆ ಮುಖ್ಯಮಂತ್ರಿ ಮಂಗಳವಾರ ಮಾಲಾರ್ಪಣೆ ಮಾಡಿದರು. ಆಗ ಮನವಿ ಪತ್ರ ಸಲ್ಲಿಸಿದ್ದ ಮೋಹನ್‌, ಮಾಜಿ ಮುಖ್ಯಮಂತ್ರಿಯ ಮನೆಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವಿಳಂಬ ಆಗಿರುವುದನ್ನು ಗಮನಕ್ಕೆ ತಂದರು.

‘ನಿಜಲಿಂಗಪ್ಪ ಅವರ ಮನೆಯನ್ನು ಸಂರಕ್ಷಿಸಲು ಹಾಗೂ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ನಾಲ್ಕು ವರ್ಷಗಳಾದರೂ ಈ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ. ಮನೆಯನ್ನು ಸರ್ಕಾರದ ವಶಕ್ಕೆ ಪಡೆಯುವುದಕ್ಕಾಗಿ ನಿಜಲಿಂಗಪ್ಪ ಅವರ ವಾರಸುದಾರರಾದ ಮೊಮ್ಮಗ ವಿನಯ್‌ ಮತ್ತು ಕಿರಣ್‌ ಶಂಕರ್‌ ಅವರನ್ನು ಚಿತ್ರದುರ್ಗದ ಹಿಂದಿನ ಜಿಲ್ಲಾಧಿಕಾರಿ ಅಮೆರಿಕದಿಂದ ಕರೆಸಿಕೊಂಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಆಸ್ತಿಯನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಪತ್ರದಲ್ಲಿ ದೂರಿದ್ದಾರೆ.

ADVERTISEMENT

ಈ ಎಲ್ಲ ಲೋಪಗಳನ್ನು ಸರಿಪಡಿಸಿ ನಿಜಲಿಂಗಪ್ಪ ಅವರ ಮನೆಯನ್ನು ಖರೀದಿಸಿ, ಸಂರಕ್ಷಿಸಲು ಮುಖ್ಯ ಕಾರ್ಯದರ್ಶಿ ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿ ಜತೆ ಸಭೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.