ADVERTISEMENT

ಮಗ್ಗಗಳ ವಿದ್ಯುತ್‌ ರಿಯಾಯಿತಿ ಹೆಚ್ಚಿಸಲು ಚಿಂತನೆ: ಸಚಿವ ಶಿವಾನಂದ ಪಾಟೀಲ

9ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಜವಳಿ ಸಚಿವ ಶಿವಾನಂದ ಎಸ್‌. ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 15:36 IST
Last Updated 7 ಆಗಸ್ಟ್ 2023, 15:36 IST
ಬೆಂಗಳೂರಿನಲ್ಲಿ ಸೋಮವಾರ ಬಾಲಾಜಿ ಜಿ.ಎನ್., ಬಿ.ಟಿ. ತಿಪ್ಪೇಸ್ವಾಮಿ, ಸಂಜೀವ ಶೆಟ್ಟಿಗಾರ್‌, ಪದ್ಮಾ ವಿಠಲ ಗಂಜಿ, ಮಂಜುನಾಥ ಟಿ.ಎಂ. ಹಾಗೂ ಎಂ. ಜಯಕೀರ್ತಿ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನಲ್ಲಿ ಸೋಮವಾರ ಬಾಲಾಜಿ ಜಿ.ಎನ್., ಬಿ.ಟಿ. ತಿಪ್ಪೇಸ್ವಾಮಿ, ಸಂಜೀವ ಶೆಟ್ಟಿಗಾರ್‌, ಪದ್ಮಾ ವಿಠಲ ಗಂಜಿ, ಮಂಜುನಾಥ ಟಿ.ಎಂ. ಹಾಗೂ ಎಂ. ಜಯಕೀರ್ತಿ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.    

ಬೆಂಗಳೂರು: ಮಗ್ಗಗಳಿಗೆ 10 ಎಚ್‌ಪಿ ವರೆಗೆ ವಿದ್ಯುತ್‌ ರಿಯಾಯಿತಿ ನೀಡುತ್ತಿರುವುದನ್ನು 20 ಎಚ್‌ಪಿ ವರೆಗೆ ಹೆಚ್ಚಿಸಲು ಮುಖ್ಯಮಂತ್ರಿ ಜತೆಗೆ ಚರ್ಚಿಸಲಾಗಿದೆ ಎಂದು ಜವಳಿ ಸಚಿವ ಶಿವಾನಂದ ಎಸ್‌. ಪಾಟೀಲ ಹೇಳಿದರು.

9ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಕೈಮಗ್ಗ ನೇಕಾರರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ನೇಕಾರರು ನೇಕಾರಿಕೆ ಬಿಟ್ಟು ಪರಾವಲಂಬಿಗಳಾಗಿ ಬದುಕಬೇಕಾದ ಪರಿಸ್ಥಿತಿ ನಿರ್ಮಾನವಾಗಿದೆ. ಇರುವ ನೇಕಾರಿಕೆಯನ್ನು ಉಳಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಎಲ್ಲ ನೇಕಾರರನ್ನು ಒಂದೇ ವೇದಿಕೆಯಡಿ ತರಬೇಕು ಎಂಬ ಕನಸು ಇದೆ. ಪಾರಂಪರಿಕ ನೇಕಾರಿಕೆಯ ಜೊತೆಗೆ ವೈಜ್ಞಾನಿಕ ನೇಕಾರಿಕೆಯನ್ನೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

‘ನೇಕಾರರಿಗೆ ಗೌರವಧನ ₹ 5,000ಕ್ಕೆ ಏರಿದೆ. ಇನ್ನಷ್ಟು ಹೆಚ್ಚಳ ಮಾಡಲು ಪ್ರಯತ್ನಿಸಲಾಗುವುದು. ಬ್ಯಾಂಕ್‌ ಸಾಲಕ್ಕೆ ಸಂಬಂಧಿಸಿದಂತೆ ರೈತರಿಗೆ ಇರುವ ರಿಯಾಯಿತಿಯನ್ನು ನೇಕಾರರಿಗೂ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಯವರ ಮುಂದೆ ಪ್ರಸ್ತಾಪ ಇಟ್ಟಿದ್ದೇನೆ’ ಎಂದರು.

ರೇಷ್ಮೆ ಸೀರೆ ನೇಕಾರಿಕೆಯಲ್ಲಿ ಪಾವಗಡ ಹೊಸಕೋಟೆಯ ಎಂ. ಜಯಕೀರ್ತೀ ಪ್ರಥಮ, ಚಿಂತಾಮಣಿ ತಿಮ್ಮಸಂದ್ರದ ಮಂಜುನಾಥ ಟಿ.ಎಂ. ದ್ವಿತೀಯ ಸ್ಥಾನ, ಹತ್ತಿ ನೇಕಾರಿಕೆಯಲ್ಲಿ ಇಳಕಲ್‌ ಪದ್ಮಾ ವಿಠಲ ಗಂಜಿ ಪ್ರಥಮ, ಕಿನ್ನಿಗೋಳಿ ಸಂಜೀವ ಶೆಟ್ಟಿಗಾರ್ ದ್ವಿತೀಯ, ಉಣ್ಣೆ ನೇಕಾರಿಕೆಯಲ್ಲಿ ಮೊಳಕಾಲ್ಮುರು ಕೊಂಡ್ಲಹಳ್ಳಿ ಬಿ.ಟಿ. ತಿಪ್ಪೇಸ್ವಾಮಿ ಪ್ರಥಮ ಸ್ಥಾನ ಪಡೆದರು. ಬಾಳೆ, ದಾಸವಾಳಗಳ ನೂಲು, ಲಾವಂಚ ಬೇರಿನ ನೂಲುಗಳನ್ನು ಬಳಸಿ ಹಾಸು, ಹೊದಿಕೆಗಳನ್ನು ತಯಾರಿಸಿದ ಕನಕಪುರ ಸಾತನೂರಿನ ಬಾಲಾಜಿ ಜಿ.ಎನ್‌. ಅವರನ್ನು ಪ್ರೋತ್ಸಾಹಿಸಲಾಯಿತು.

ಚಿತ್ರದುರ್ಗ ಬಸವೇಶ್ವರ ಮಠದ ಹನುಮಂತರಾಯ ಸ್ವಾಮೀಜಿ, ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಮಂಡಳ ಅಧ್ಯಕ್ಷ ಬಿ.ಜೆ. ಗಣೇಶ್‌, ವ್ಯವಸ್ಥಾಪಕ ನಿರ್ದೇಶಕ ಆರ್. ಲಿಂಗರಾಜು, ಸರ್ಕಾರದ ಕಾರ್ಯದರ್ಶಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಜವಳಿ ಅಭಿವೃದ್ಧಿ ಆಯುಕ್ತ ಟಿ.ಎಚ್‌.ಎಂ. ಕುಮಾರ್‌, ನೇಕಾರ ಸೇವಾ ಕೇಂದ್ರದ ಉಪನಿರ್ದೇಶಕ ನಾಚಿಮುತ್ತು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಶಶಿಧರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.