ADVERTISEMENT

ಬೆಂಗಳೂರು | ಕೋವಿಡ್‌ನಿಂದ ಮೃತಪಟ್ಟ ಎಎಸ್‌ಐ

ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ ಹೆಡ್‌ ಕಾನ್‌ಸ್ಟೆಬಲ್‌ಗೂ ಸೋಂಕು

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 21:34 IST
Last Updated 28 ಜೂನ್ 2020, 21:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಎಸ್ಐಯೊಬ್ಬರು ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ಶನಿವಾರ ರಾತ್ರಿ ಮೃತಪಟ್ಟಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿದ್ದು ಪರೀಕ್ಷೆಯಿಂದ ದೃಢಪಟ್ಟಿದೆ. ಜೊತೆಗೆ, ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ ಹೆಡ್‌ ಕಾನ್‌ಸ್ಟೆಬಲ್‌ ಅವರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

57 ವರ್ಷದ ಎಎಸ್ಐ, ವೈಟ್‌ ಫೀಲ್ಡ್ ವಿಭಾಗ ವ್ಯಾಪ್ತಿಯ ಠಾಣೆ ಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾನ್‌ಸ್ಟೆಬಲ್‌ ಆಗಿ ಸೇವೆಗೆ ಸೇರಿದ್ದ ಅವರಿಗೆ ಇತ್ತೀಚೆಗಷ್ಟೇ ಎಎಸ್‌ಐ ಆಗಿ ಬಡ್ತಿ ಸಿಕ್ಕಿತ್ತು. ಪತ್ನಿ ಹಾಗೂ ಮಕ್ಕಳ‌ ಜೊತೆ ವಾಸವಿದ್ದರು. ಶನಿವಾರ ರಾತ್ರಿ ಶೌಚಾಲಯಕ್ಕೆ ಹೋಗಿದ್ದ ಅವರು ಅಲ್ಲಿಯೇ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

‘ಮೃತದೇಹದ ಗಂಟಲಿನ ದ್ರವವನ್ನು ಸಂಗ್ರಹಿಸಿದ ವೈದ್ಯರು, ಪರೀಕ್ಷೆಗೆ ಕಳು ಹಿಸಿದ್ದರು. ಅದರ ವರದಿ ಪಾಸಿಟಿವ್ ಬಂದಿದೆ’ ಎಂದು ವೈಟ್‌ಪೀಲ್ಡ್ ವಿಭಾ ಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ. ಸಣ್ಣ ಆರೋಗ್ಯ ಸಮಸ್ಯೆ ಇರುವ 45 ವರ್ಷ ಮೇಲ್ಪಟ್ಟ ಸಿಬ್ಬಂದಿ ಸಹ ಶನಿವಾರದಿಂದ ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ಹೆಡ್‌ ಕಾನ್‌ಸ್ಟೆಬಲ್‌ಗೂ ಕೊರೊನಾ: ಉಪ್ಪಾರಪೇಟೆ ಠಾಣೆ ಕಟ್ಟಡದಲ್ಲೇ ಇರುವ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್‌ ಬಾನೂತ್ ಅವರ ಕಚೇರಿಯ ಹೆಡ್‌ ಕಾನ್‌ಸ್ಟೆಬಲ್‌ ಅವರಿಗೂ ಸೋಂಕು ತಗುಲಿದ್ದು, ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ಸೋಂಕು ಹೆಚ್ಚಳ: ತವರಿನತ್ತ ಮುಖ ಮಾಡಿದ ಜನರು
ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಸಾಕಷ್ಟು ಜನರು ತಮ್ಮೂರಿನತ್ತ ತೆರಳಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ ವಿಪರೀತ ಸಂಚಾರ ದಟ್ಟಣೆ ಕಂಡುಬಂತು.

ನೆಲಮಂಗಲ ಟೋಲ್‌ಗೇಟ್‌ನಲ್ಲಿ ಮನೆ ಸಾಮಗ್ರಿ ಹಾಗೂ ಪೀಠೋ ಪಕರಣ ಹೊತ್ತ ವಾಹನಗಳೇ ಹೆಚ್ಚಿ ದ್ದವು. ಖಾಸಗಿ ವಾಹನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದರು.

ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ನಗರದಲ್ಲಿ ವಾಣಿಜ್ಯ ಚಟುವಟಿಕೆ ಪುನಃ ಆರಂಭವಾಗಿದೆ. ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ ಅಥವಾ ಶನಿವಾರ ರಾತ್ರಿ ಜನ ಊರಿಗೆ ಹೋಗುವುದು ಹಾಗೂ ಸೋಮವಾರ ಬೆಳಿಗ್ಗೆ ವಾಪಸು ಬರುವುದು ಸಾಮಾನ್ಯವಾಗಿತ್ತು. ಆದರೆ, ಭಾನುವಾರವೂ ಜನ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಿದ್ದು ಕಂಡು ಬಂತು. ಯಶವಂತಪುರ, ಪೀಣ್ಯ, ಜಾಲಹಳ್ಳಿ, ನೆಲಮಂಗಲ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲೂ ದಟ್ಟಣೆ ಉಂಟಾಯಿತು.

‘ಬೇರೆ ದಿನಗಳಲ್ಲಿ ದಟ್ಟಣೆ ಸಾಮಾನ್ಯ. ಭಾನುವಾರವೂ ವಾಹನಗಳ ದಟ್ಟಣೆ ಕಂಡುಬಂದಿದ್ದು ಇದೇ ಮೊದಲು’ ಎಂದು ನವಯುಗ ಟೋಲ್‌ಗೇಟ್‌ ಸಿಬ್ಬಂದಿಯೊಬ್ಬರು ಹೇಳಿದರು.

‘50 ವರ್ಷ ಮೇಲ್ಪಟ್ಟ ಪೊಲೀಸರಿಗೆ ಮನೆಯಿಂದ ಕೆಲಸ’
ಬೆಂಗಳೂರು:
ನಗರ ಕಮಿಷನರೇಟ್ ವ್ಯಾಪ್ತಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ 50 ವರ್ಷ ಮೇಲ್ಪಟ್ಟ ಪೊಲೀಸರು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿ ಕಮಿಷನರ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

‘ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ, ನಗರ ಸಶಸ್ತ್ರ ಮೀಸಲು ಪಡೆ, ಸಿಸಿಬಿ ಮತ್ತು ವಿಶೇಷ ಘಟಕಗಳ 50 ವರ್ಷ ಮೇಲ್ಪಟ್ಟ ಪೊಲೀಸರು ಮನೆಯಿಂದಲೇ ಕರ್ತವ್ಯ ನಿರ್ವಹಿಸಬೇಕು’ ಎಂದು ಆದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.