ADVERTISEMENT

ಕೊರೊನಾ ಗಂಭೀರ: ಹೊರಗೆ ಕಾಲಿಟ್ಟರೆ ಜೈಲು, ಭಾರಿ ದಂಡ!

ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ಕನ್ನಡತಿ ಆತಂಕ

ರಾಜೇಶ್ ರೈ ಚಟ್ಲ
Published 1 ಏಪ್ರಿಲ್ 2020, 20:38 IST
Last Updated 1 ಏಪ್ರಿಲ್ 2020, 20:38 IST
ವೀಣಾ ಮತ್ತು ಸುರೇಶ್
ವೀಣಾ ಮತ್ತು ಸುರೇಶ್   

ಬೆಂಗಳೂರು: ‘ಕೊರೊನಾ ಸೋಂಕು ಹರಡುವ ಭೀತಿ ಇಲ್ಲಿ ತುಂಬಾ ಗಂಭೀರವಾಗಿದೆ. ಅನಗತ್ಯವಾಗಿ ಹೊರಗೆ ಕಾಲಿಟ್ಟರೆ ಒಂದು ವರ್ಷ ಜೈಲು ಅಥವಾ 5,000 ಯುಸ್‌ ಡಾಲರ್‌ ದಂಡ ವಿಧಿಸುವುದಾಗಿ ಗವರ್ನರ್‌ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಹೊರಗಡೆ ಯಾರೂ ಅಡ್ಡಾಡುತ್ತಿಲ್ಲ’ ಎಂದು ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿ, ಕನ್ನಡತಿ ವೀಣಾ ಸುರೇಶ್‌ ಆತಂಕ ವ್ಯಕ್ತಪಡಿಸಿದರು.

ವಾಟ್ಸ್ಆ್ಯಪ್‌ ಕರೆ ಮಾಡಿ ‘ಪ್ರಜಾವಾಣಿ‘ ಜೊತೆ ಮಾತನಾಡಿದ ಅವರು, ‘ನಾವಿರುವ ಮೇರಿಲ್ಯಾಂಡ್‌, ಸಮೀಪದ ವರ್ಜೀನಿಯಾ ಮತ್ತು ವಾಷಿಂಗ್ಟನ್‌ ಡಿಸಿಯಲ್ಲಿ ಭಾರಿ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರಿದ್ದಾರೆ. ಈ ಮೂರೂ ಪ್ರದೇಶಗಳಲ್ಲಿ ಮಾತ್ರ 2,900ಕ್ಕೂ ಹೆಚ್ಚು ಮಂದಿಗೆ ಕೋವಿಡ್‌ 19 ದೃಢಪಟ್ಟಿದೆ. ಇಡೀ ಅಮೆರಿಕದಲ್ಲಿ ಮುಂದಿನ ಎರಡು ವಾರಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದ್ದು, 1 ಲಕ್ಷದಿಂದ 2.40 ಲಕ್ಷ ಜನ ಸೋಂಕಿಗೆ ಬಲಿಯಾಗುವ ಸಾಧ್ಯತೆ ಇದೆಯೆಂಬ ಮಾಹಿತಿ ಎಲ್ಲರನ್ನೂ ಕಂಗೆಡಿಸಿದೆ’ ಎಂದರು.

‘ನಮ್ಮಲ್ಲಿ ಮತ್ತು ವರ್ಜೀನಿಯಾದಲ್ಲಿ ಮಾರ್ಚ್‌ 30ರ ರಾತ್ರಿ 8 ಗಂಟೆಯಿಂದ ಏ‍ಪ್ರಿಲ್ 30ರವರೆಗೆ ಲಾಕ್‌ಡೌನ್‌ ಘೋಷಿಸಲಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ಬುಧವಾರದಿಂದ (ಏ. 1) ಘೋಷಿಸಲಾಗಿದೆ. ಎಲ್ಲ ಕಚೇರಿಗಳು ಬಂದ್ ಆಗಿವೆ. ಶಾಲಾ–ಕಾಲೇಜುಗಳ ಪರೀಕ್ಷೆ ರದ್ದುಪಡಿಸಿ, ಆನ್‌ಲೈನ್‌ ಮೂಲಕ ತರಗತಿ ನಡೆಯುತ್ತಿದೆ. ತುರ್ತು ಅಗತ್ಯಗಳಾದ ಔಷಧ ಮತ್ತು ದಿನಸಿಗಳಿಗೆ ಮಾತ್ರ ಹೊರಗೆ ಹೋಗಬಹುದು. ಅಂಥವರ ಮೇಲೂ ಸ್ಥಳೀಯ ಪೊಲೀಸರು ನಿಗಾ ವಹಿಸಿದ್ದಾರೆ’ ಎಂದರು.

ADVERTISEMENT

‘ಇಲ್ಲಿರುವ ಭಾರತೀಯರ ಅಂಗಡಿಗಳೆಲ್ಲ ಬಾಗಿಲು ಮುಚ್ಚುತ್ತಿವೆ. ಹೀಗಾಗಿ, ನಾವೆಲ್ಲರೂ ಆನ್‌ಲೈನ್‌ ಮೂಲಕ ದಿನಸಿ ತರಿಸಿಕೊಳ್ಳುತ್ತಿದ್ದೇವೆ. ಆ ರೀತಿ ಸರಬರಾಜು ವ್ಯವಸ್ಥೆಯ ಸುರಕ್ಷತೆಯ ಮೇಲೂ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಆದರೂ, ದಿನಾ ತೀವ್ರ ಆತಂಕ ಎದುರಿಸುತ್ತಿದ್ದೇವೆ’ ಎಂದು ವಿವರಿಸಿದರು.

‘ಭಾರತದಲ್ಲಿರುವಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಸ್ವಂತ ವಾಹನಗಳಲ್ಲೇ ಜನ ಓಡಾಡುತ್ತಾರೆ. ಹೀಗಾಗಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸುಲಭ. ನಮ್ಮಲ್ಲಿಂದ ವಾಷಿಂಗ್ಟನ್‌ ಡಿಸಿಗೆ ತೆರಳುವ ಮೆಟ್ರೊ ರೈಲು ಓಡಾಟ ನಿಲ್ಲಿಸಿದೆ. ಸೋಂಕಿನ ಗಂಭೀರತೆ ಅರಿಯಲು ಆಡಳಿತ ವಿಳಂಬ ಮಾಡಿದ್ದರಿಂದ ಜನರು ತೀವ್ರ ಆತಂಕ ಅನುಭವಿಸುವಂತಾಗಿದೆ’ ಎಂದೂ ವೀಣಾ ಹೇಳಿದರು.

ಲಾಕ್‌ಡೌನ್‌ ವಿಳಂಬದಿಂದ ಆತಂಕ: ಸುರೇಶ್‌
‘ಕೊರೊನಾ ಸೋಂಕಿನ ಭೀಕರತೆ ಅರಿವಾಗುತ್ತಿದ್ದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ ಘೋಷಿಸಿದರು. ಆದರೆ, ನಮ್ಮ ಅಧ್ಯಕ್ಷ (ಟ್ರಂಪ್) ಈ ವಿಷಯದಲ್ಲಿ ವಿಳಂಬ ಮಾಡಿದರು ಅನಿಸುತ್ತಿದೆ. ಹೀಗಾಗಿ, ಇಲ್ಲಿನ ಪರಿಸ್ಥಿತಿ ನಿಯಂತ್ರಣ ಮೀರಿದ ಹಂತಕ್ಕೆ ತಲುಪಿದೆ’ ಎಂದು ವೀಣಾ ಅವರ ಪತಿ ಸಾಫ್ಟ್‌ವೇರ್‌ ಕಂಪನಿ ಮಾಲೀಕ ಸುರೇಶ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.