ADVERTISEMENT

ಕೊರೊನಾ ಸೋಂಕಿತರಿಗೆ ‘ಪ್ಲಾಸ್ಮಾ’ ನೀಡಿದ ಎಸಿಪಿ

ಕೊರೊನಾ ಸೋಂಕಿನಿಂದ ಗುಣಮುಖವಾಗಿರುವ ಸತೀಶ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 2:05 IST
Last Updated 25 ಜುಲೈ 2020, 2:05 IST
ಎಸಿಪಿ ಸತೀಶ್
ಎಸಿಪಿ ಸತೀಶ್   

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖವಾಗಿರುವ ಯಲಹಂಕ ಉಪವಿಭಾಗದ (ಸಂಚಾರ) ಎಸಿಪಿ ಎಂ.ಎಚ್‌.ಸತೀಶ್ ಅವರು ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಪ್ಲಾಸ್ಮಾ ದಾನ ಮಾಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ್ದ ಸತೀಶ್, ವೈದ್ಯರ ಸಮ್ಮುಖದಲ್ಲಿ ಪ್ಲಾಸ್ಮಾ ನೀಡಿದರು. ಪ್ಲಾಸ್ಮಾ ದಾನ ಮಾಡಿದ ನಗರದ 6ನೇ ವ್ಯಕ್ತಿ ಇವರು. ಸತೀಶ್ ಅವರ ಕೆಲಸ ಮೆಚ್ಚಿದ ವೈದ್ಯೆ ಡಾ. ಆರ್.ಶ್ರೀಲತಾ, ‘ಸೂಪರ್ ಹೀರೊ’ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಸತೀಶ್, ‘ಪೊಲೀಸರು ಎಂದರೆ ಕೇವಲ ರಕ್ಷಕರಲ್ಲ. ಜನರ ಪ್ರಾಣ ಉಳಿಸುವ ಸೇವಕರೂ ಹೌದು. ಪ್ಲಾಸ್ಮಾ ಚಿಕಿತ್ಸೆಗೆ ಒಳಪಟ್ಟು ಸೋಂಕಿತರು ಬೇಗ ಗುಣಮುಖವಾಗಲಿ ಎಂಬ ಕಾರಣಕ್ಕೆ ಪ್ಲಾಸ್ಮಾ ಕೊಟ್ಟಿದ್ದೇನೆ’ ಎಂದರು.

ADVERTISEMENT

‘ಸಭೆಯೊಂದರಲ್ಲಿ ಪಾಲ್ಗೊಂಡು ಮನೆಗೆ ಬಂದಾಗ ಗಂಟಲು ನೋವು, ಜ್ವರ ಹಾಗೂ ತಲೆ ನೋವು ಕಾಣಿಸಿಕೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕವಾಗಿ ವಾಸವಿದ್ದು, ಕೊರೊನಾ ಪರೀಕ್ಷೆ ಮಾಡಿಸಿದ್ದೆ. ಜೂನ್ 23ರಂದು ಪಾಸಿಟಿವ್ ವರದಿ ಬಂದಿತ್ತು. ನಂತರ, ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖವಾದೆ. ಈಗ, ಹೋಂ ಕ್ವಾರಂಟೈನ್ ಅವಧಿಯೂ ಮುಗಿದಿದೆ’ ಎಂದೂ ಹೇಳಿದರು.

‘ಕೊರೊನಾ ವೈರಾಣು ನಿಯಂತ್ರಿಸುವ ರೋಗ ನಿರೋಧಕ ಶಕ್ತಿ ನನ್ನಲ್ಲಿದೆ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ತಿಳಿಯಿತು. ಪ್ಲಾಸ್ಮಾ ದಾನದ ಬಗ್ಗೆ ಅರಿವು ಮೂಡಿಸಲು ಹಾಗೂ ಹೆಚ್ಚೆಚ್ಚು ಜನರು ಪ್ಲಾಸ್ಮಾ ನೀಡಲಿ ಎಂಬ ಆಶಯದಿಂದ ಈ ಕೆಲಸ ಮಾಡಿದ್ದೇನೆ. ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನನ್ನನ್ನು ಪ್ರೋತ್ಸಾಹಿಸಿದ್ದರು’ ಎಂದು ಸತೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.