ಸಾಂದರ್ಭಿಕ ಚಿತ್ರ
ಬೆಂಗಳೂರು: ‘ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದಂತೆ ಎರಡು ವರ್ಷದೊಳಗಿನ ಮಕ್ಕಳಿಗೆ ಔಷಧ ಶಿಫಾರಸು ಮಾಡಬಾರದು. ಐದು ವರ್ಷದೊಳಗಿನ ಮಕ್ಕಳಿಗೂ ಸಾಮಾನ್ಯವಾಗಿ ಅಗತ್ಯ ಇರುವುದಿಲ್ಲ. ಅತಿ ಅಗತ್ಯವಾದರೆ ಮಾತ್ರ ಸೂಕ್ತ ಪ್ರಮಾಣದಲ್ಲಿ ಕಡಿಮೆ ಅವಧಿಗೆ ಒದಗಿಸಬೇಕು’ ಎಂದು ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್‌ಎಸ್) ಸೂಚಿಸಿದೆ.
ಈ ಬಗ್ಗೆ ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದೆ. ‘ಮಕ್ಕಳಲ್ಲಿನ ಕೆಮ್ಮಿಗೆ ಔಷಧಗಳನ್ನು ವಿವೇಚನೆ ಬಳಸಿ ವೈದ್ಯರು ಶಿಫಾರಸು ಮಾಡಬೇಕು. ಬಹುತೇಕ ಕೆಮ್ಮಿನ ಸಮಸ್ಯೆಗಳು ಔಷಧಗಳ ಅಗತ್ಯವಿಲ್ಲದೆ ಕಡಿಮೆಯಾಗುತ್ತವೆ. ಆದ್ದರಿಂದ ಅನಗತ್ಯವಾಗಿ ಔಷಧ ಬಳಕೆ ತಪ್ಪಿಸಿ, ವೈದ್ಯರ ಸಲಹೆಗಳನ್ನು ಮಾತ್ರ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದೆ.
‘ಕೆಮ್ಮಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದಲ್ಲಿ ದ್ರವ ಆಹಾರ ಸೇವನೆ, ವಿಶ್ರಾಂತಿ ಮತ್ತು ಇತರೆ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು. ಈ ಬಗ್ಗೆ ಜಿಲ್ಲಾ ಆರೋಗ್ಯ ಪ್ರಾಧಿಕಾರಗಳು ಸರ್ಕಾರಿ ಆರೋಗ್ಯ ಕೇಂದ್ರಗಳು, ಔಷಧ ಮಳಿಗೆಗಳಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.