ADVERTISEMENT

ಆಂಬುಲೆನ್ಸ್‌ ನಿಯಂತ್ರಣಾ ಕೇಂದ್ರ :‌ ಇನ್ನಷ್ಟು ದಾಖಲೆ ಕೇಳಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 19:03 IST
Last Updated 18 ಜನವರಿ 2021, 19:03 IST

ಬೆಂಗಳೂರು: ಆಂಬುಲೆನ್ಸ್‌ ನಿಯಂತ್ರಣಾ ಕೇಂದ್ರ (ಕಮಾಂಡ್‌ ಕಂಟ್ರೋಲ್‌ ರೂಮ್)‌ ಯೋಜನೆಯ ಟೆಂಡರ್‌ ಪ್ರಕ್ರಿಯೆ ರದ್ದುಪಡಿಸುವ ಮುನ್ನ ಸಾರ್ವಜನಿಕ ಸಭೆ ನಡೆಸಿರುವ ಬಗ್ಗೆ ದಾಖಲೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಟೆಂಡರ್‌ ರದ್ದುಪಡಿಸಲಾಗಿದೆ ಎಂದು ಸರ್ಕಾರ ಸಲ್ಲಿಸಿದ್ದ ಹೇಳಿಕೆ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.‌ ಓಕಾ ನೇತೃತ್ವದ ವಿಭಾಗೀಯ ಪೀಠ, ತಜ್ಞರ ಅಭಿಪ್ರಾಯ ಸಂಗ್ರಹಿಸಿರುವ ಬಗ್ಗೆಯೂ ದಾಖಲೆ ಒದಗಿಸುವಂತೆ ತಿಳಿಸಿದೆ.

ಸರ್ಕಾರ ಸಲ್ಲಿಸಿರುವ ದಾಖಲೆ ಪರಿಶೀಲಿಸಿದರೆ ಯಾವೊಬ್ಬ ತಜ್ಞರ ಅಭಿಪ್ರಾಯವನ್ನೂ ಪಡೆದಂತಿಲ್ಲ. ಯೋಜನೆಯನ್ನು ಇನ್ನಷ್ಟು ದಿನ ಎಳೆಯುವ ಉದ್ದೇಶವನ್ನು ಸರ್ಕಾರ ಹೊಂದಿದಂತಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.ಟೆಂಡರ್‌ ಪ್ರಕ್ರಿಯೆ ರದ್ದುಪಡಿಸಿ ಆಂಬುಲೆನ್ಸ್‌ ನಿಯಂತ್ರಣ ಕೇಂದ್ರ ತೆರೆಯುವ ಸಂಬಂಧ ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಹಿಂದಿನ ವಿಚಾರಣೆ ವೇಳೆ ಸರ್ಕಾರ ಮಾಹಿತಿ ನೀಡಿತ್ತು.

ADVERTISEMENT

ಈ ಸಂಬಂಧ ದಾಖಲೆ ಸಲ್ಲಿಸುವಂತೆ ಪೀಠ ತಿಳಿಸಿತ್ತು. ನಗರದ ಸಂಚಾರ ದಟ್ಟಣೆಯಲ್ಲಿ ಆಂಬುಲೆನ್ಸ್‌ಗಳು ಸಿಲುಕಿಕೊಂಡು ಸರಿಯಾದ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ತಲುಪಲು ಆಗುತ್ತಿಲ್ಲ. ಆಂಬುಲೆನ್ಸ್‌ ನಿಯಂತ್ರಣಾ ಕೇಂದ್ರ ತೆರೆಯಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಭಾರತ ಪುನರುತ್ಥಾನ ಟ್ರಸ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.