ADVERTISEMENT

ಬೆಂಗಳೂರು | ಮೂಲಸೌಕರ್ಯಗಳ ಕೊರತೆ: ಕೋರ್ಟ್‌ ಹಾಲ್‌ಗಳ ಆರಂಭಕ್ಕೆ ಅಡ್ಡಿ

ಎ.ಎಂ.ಸುರೇಶ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
ಸಿಟಿ ಸಿವಿಲ್‌ ಕೋರ್ಟ್‌
ಸಿಟಿ ಸಿವಿಲ್‌ ಕೋರ್ಟ್‌   

ಬೆಂಗಳೂರು: ಸಿಟಿ ಸಿವಿಲ್‌ ಕೋರ್ಟ್‌ಗೆ ಒಟ್ಟು 95 ಕೋರ್ಟ್‌ ಹಾಲ್‌ಗಳು ಮಂಜೂರಾಗಿದ್ದು, ಮೂಲಸೌಕರ್ಯಗಳ ಕೊರತೆಯ ಕಾರಣಕ್ಕೆ 17 ಕೋರ್ಟ್‌ ಹಾಲ್‌ಗಳು ಈವರೆಗೆ ಕಾರ್ಯಾರಂಭ ಮಾಡಿಯೇ ಇಲ್ಲ. ಇದರಿಂದಾಗಿ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದ್ದು, ಕಕ್ಷಿದಾರರು ವರ್ಷಾನುಗಟ್ಟಲೇ ಕಾಯುವಂತಾಗಿದೆ.

ಸಿಟಿ ಸಿವಿಲ್‌ ಕೋರ್ಟ್‌ಗೆ ಮಂಜೂರಾದ ಕೋರ್ಟ್‌ ಹಾಲ್‌ಗಳ ಪೈಕಿ, ಸದ್ಯ 78 ಅಷ್ಟೇ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಉಳಿದ ಕೋರ್ಟ್‌ ಹಾಲ್‌ಗಳ ಮೇಲೆ ಒತ್ತಡ ಹೆಚ್ಚಾಗಿದ್ದು ಪ್ರಕರಣಗಳ ವಿಚಾರಣೆ ಮೇಲೆ ಪರಿಣಾಮ ಬೀರುತ್ತಿದೆ. ಒಂದೇ ಕಡೆ ಮೂರು ಕೋರ್ಟ್‌ಗಳು ಬೇರೆ ಎಲ್ಲೂ ಇಲ್ಲ. ಇಲ್ಲಿ ಮಾತ್ರ ಅಂತಹ ವ್ಯವಸ್ಥೆ ಇದೆ. ಜಾಗದ ಕೊರತೆ ಉಂಟಾಗಲು ಇದು ಪ್ರಮುಖ ಕಾರಣವಾಗಿದೆ’ ಎಂದು ನ್ಯಾಯಾಲಯದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗ್ರಾಮಾಂತರ ನ್ಯಾಯಾಲಯದಲ್ಲಿ 29 ಕೋರ್ಟ್‌ ಹಾಲ್‌ಗಳಿವೆ. ಸದ್ಯ 24 ಕಾರ್ಯನಿರ್ವಹಿಸುತ್ತಿದ್ದು, ಜಾಗದ ಕೊರತೆಯಿಂದಾಗಿ ಐದು ಕೋರ್ಟ್‌ ಹಾಲ್‌ಗಳನ್ನು ಆರಂಭಿಸಲು ಸಾಧ್ಯವಾಗಿಲ್ಲ’ ಎಂದು ಅವರು ಬೇಸರ
ವ್ಯಕ್ತಪಡಿಸಿದರು.

‘ಎನ್‌ಐಎ, ಸಿಬಿಐ, ಪೋಕ್ಸೊ, ಲೋಕಾಯುಕ್ತ ವಿಶೇಷ ನ್ಯಾಯಾಲಯ, ಜನಪ್ರತಿನಿಧಿಗಳ ನ್ಯಾಯಾಲಯ ಸೇರಿ ಹಲವು ವಿಶೇಷ ನ್ಯಾಯಾಲಯ ಗಳಿಗೆ ಇಲ್ಲಿ ಜಾಗ ನೀಡಲಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳು, ನ್ಯಾಯಾಲಯಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ, ಜಾಗ ಮಾತ್ರ ಇದಷ್ಟೇ ಇದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಜಾಗದ ವ್ಯವಸ್ಥೆ ಮಾಡಿಕೊಟ್ಟರೆ ಪೂರ್ಣ ಪ್ರಮಾಣದಲ್ಲಿ ಕೋರ್ಟ್‌ ಹಾಲ್‌ಗಳನ್ನು ಆರಂಭಿಸಲು ಸಾಧ್ಯವಾಗಲಿದೆ’ ಎಂದು ಅವರು ತಿಳಿಸಿದರು.

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆ ಪ್ರಕಾರ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕಾಗಿದೆ. ಆದರೆ, ಜಾಗದ ಕೊರತೆಯಿಂದ ಇದುವರೆಗೆ ನ್ಯಾಯಾಲಯ ಕಾರ್ಯಾರಂಭವಾಗಿಲ್ಲ. ಠೇವಣಿದಾರರು ವಂಚನೆಗೆ ಒಳಗಾದರೆ, ಅಂತಹ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ ನ್ಯಾಯ ಕೊಡಿಸಬೇಕು ಎಂಬುದು ಈ ಕಾಯ್ದೆಯ ಆಶಯ. ಆದರೆ, ನ್ಯಾಯಾಲಯವೇ ಶುರುವಾಗಿಲ್ಲ. ಇದಲ್ಲದೆ ಯಲಹಂಕ ಮತ್ತು ಕೆಂಗೇರಿಯಲ್ಲಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರಂಭಿಸಬೇಕು. ಆದರೆ, ಜಾಗದ ಕೊರತೆಯಿಂದಾಗಿ ಇದು ಸಾಧ್ಯವಾಗಿಲ್ಲ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದೆ. ಇದು ಸರಿಯಲ್ಲ, ಇದನ್ನು ಹೊಸಕೋಟೆ ಅಥವಾ ದೇವನಹಳ್ಳಿಗೆ ಸ್ಥಳಾಂತರ ಮಾಡಬೇಕು. ಇದರಿಂದ ಆ ಭಾಗದ ಕಕ್ಷಿದಾರರು ಬೆಂಗಳೂರಿಗೆ ಬರುವುದು ತಪ್ಪುತ್ತದೆ. ಈ ರೀತಿ ಮಾಡುವುದರಿಂದ ಸಿಟಿ ಸಿವಿಲ್‌ ನ್ಯಾಯಾಲಯಕ್ಕೆ ಜಾಗವೂ ಲಭ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಾಡಿಗೆ ಕಟ್ಟಡದಲ್ಲಿ ವಾಣಿಜ್ಯ ನ್ಯಾಯಾಲಯ

ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಸ್ಥಳಾವಕಾಶ ಇಲ್ಲದ ಕಾರಣ, ಬಿಎಸ್‌ಎನ್‌ಎಲ್‌ ಕಟ್ಟಡದಲ್ಲಿ ಎರಡು ಮಹಡಿಗಳನ್ನು ಬಾಡಿಗೆಗೆ ಪಡೆದು ವಾಣಿಜ್ಯ ನ್ಯಾಯಾಲಯವನ್ನು ಆರಂಭಿಸಲಾಗಿದೆ. ವಾಣಿಜ್ಯ ವಿವಾದಗಳನ್ನು ಬಗೆಹರಿಸಲೆಂದೇ ಈ ವಿಶೇಷ ನ್ಯಾಯಾಲಯ ಶುರುವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲ ಯವನ್ನು ಬೇರೆಡೆಗೆ ಸ್ಥಳಾಂತರ ಮಾಡಿದರೆ, ಆಗ ಸಿಟಿ ಸಿವಿಲ್‌ ನ್ಯಾಯಾಲಯ ಆವರಣದಲ್ಲೇ ವಾಣಿಜ್ಯ ನ್ಯಾಯಾಲಯಕ್ಕೆ ಜಾಗ ಮಾಡಿಕೊಡಬಹುದು. ಇದರಿಂದ ಬಾಡಿಗೆ ಹಣ ಉಳಿತಾಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕೌಟುಂಬಿಕ ನ್ಯಾಯಾಲಯದಲ್ಲೂ ಜಾಗದ ಸಮಸ್ಯೆ

ಇತ್ತೀಚಿನ ವರ್ಷಗಳಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡು 21 ಕೋರ್ಟ್‌ ಹಾಲ್‌ಗಳನ್ನು ಮಂಜೂರು ಮಾಡಲಾಗಿದೆ. ಆದರೆ, ಸದ್ಯಕ್ಕೆ ಏಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಜಾಗದ ಕೊರತೆಯಿಂದಾಗಿ 14 ಕೋರ್ಟ್‌ ಹಾಲ್‌ಗಳು ಶುರುವಾಗಿಲ್ಲ.

ಕೌಟುಂಬಿಕ ನ್ಯಾಯಾಲಯಕ್ಕೆ ಅಗತ್ಯವಿರುವ ಕಟ್ಟಡದ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳುವುದು ತುಂಬಾ ವಿಳಂಬವಾಗಿದೆ. ಆದಷ್ಟು ಬೇಗ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಕೋರ್ಟ್‌ ಹಾಲ್‌ಗಳು ಕಾರ್ಯಾರಂಭ ಮಾಡಲು ಅನುಕೂಲವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನ್ಯಾಯಾಲಯಗಳು ಒಂದೇ ಕಡೆ ಇದ್ದರೆ ವಕೀಲರಿಗೆ ಅನುಕೂಲವಾಗಲಿದೆ. ಜಾಗದ ಕೊರತೆ ಇದ್ದರೆ ಕಾವೇರಿ ಭವನ ಅಥವಾ ಯುವಿಸಿಇ ಹಾಸ್ಟೆಲ್‌ನ ಜಾಗವನ್ನು ಪಡೆಯಲು ಮುಂದಾಗಲಿ. ಅಲ್ಲಿನ ವಿದ್ಯಾರ್ಥಿಗಳಿಗೆ ಬೇರೆ ಕಡೆ ವ್ಯವಸ್ಥೆ ಮಾಡಬಹುದು.
-ವಿವೇಕ್‌ ಸುಬ್ಬಾರೆಡ್ಡಿ, ಅಧ್ಯಕ್ಷ, ಬೆಂಗಳೂರು ವಕೀಲರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.