ADVERTISEMENT

ಕೋವಿಡ್–19 ಸೋಂಕಿತರ ಶವ ಸಂಸ್ಕಾರ: ಅಮಾನತು ಆದೇಶ ರದ್ದುಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 22:09 IST
Last Updated 18 ಜುಲೈ 2020, 22:09 IST
   

ಬೆಂಗಳೂರು: ಕೋವಿಡ್‌ ಶವಸಂಸ್ಕಾರದ ವೇಳೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಕಾರಣಕ್ಕೆ ಅಮಾನತುಗೊಂಡಿರುವ ಯಾದಗಿರಿಯ ಇಬ್ಬರು ‘ಸಿ’ ದರ್ಜೆಯ ನೌಕರರು ಅಮಾಯಕರಾಗಿದ್ದಾರೆ. ಹಾಗಾಗಿ, ಕೂಡಲೇ ಅಮಾನತು ಆದೇಶವನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ರಾಜ್ಯದ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಕೇಂದ್ರ ಸಂಘವು ಆರೋಗ್ಯ ಇಲಾಖೆಯ ಆಯುಕ್ತರಿಗೆ ಆಗ್ರಹಿಸಿದೆ.

ಈ ಸಂಬಂಧ ಸಂಘವು ಆಯುಕ್ತರಿಗೆ ಪತ್ರ ಬರೆದಿದೆ. ಯಾದಗಿರಿಯ ಹೊನಗೇರಾದ ಪ್ರಾಥಮಿಕ ಆರೋಗ್ಯ ಕೇಂದ್ರದ ‘ಸಿ’ ದರ್ಜೆಯ ನೌಕರರಾದ ಸುಭಾಷ್ ಮತ್ತು ತಾಯಪ್ಪ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಜೂನ್‌ 25ರಿಂದ ಜುಲೈ 3ರವರೆಗೆ ವಿದ್ಯಾರ್ಥಿಗಳ ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದರು.

ಜೂನ್‌ 30ರಂದು ಪರೀಕ್ಷೆಗೆ ಬಿಡುವಿತ್ತು. ಹೊನಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ಮೌಖಿಕ ಸೂಚನೆಯಂತೆ ಕೋವಿಡ್ ಪೀಡಿತ 48 ವರ್ಷದ ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಪಿಪಿಇ ಕಿಟ್ ನೀಡಲು ತೆರಳಿದ್ದರು. ಆದರೆ, ಕುಟುಂಬದ ಸದಸ್ಯರು ಪಿಪಿಇ ಕಿಟ್‌ ಧರಿಸಲು ನಿರಾಕರಿಸಿದ್ದರು. ಆ ಹಂತದಲ್ಲಿ ವೈದ್ಯಾಧಿಕಾರಿಯ ಸೂಚನೆಯಂತೆ ಅಲ್ಲಿನ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ನೀಡಿ, ವಾಪಸ್ ಆಗಿದ್ದರು ಎಂದು ಸಂಘ ತಿಳಿಸಿದೆ.

ADVERTISEMENT

ಮೇಲಧಿಕಾರಿಯನ್ನು ರಕ್ಷಿಸುವ ಸಂಬಂಧ ಅಮಾಯಕರನ್ನು ಅಮಾನತು ಮಾಡಲಾಗಿದೆ. ಐದು ತಿಂಗಳಿನಿಂದ ಅವರು ಒಂದು ದಿನವೂ ರಜೆ ಪಡೆಯದೆ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಸದರಿ ಆದೇಶವನ್ನು ರದ್ದುಪಡಿಸಿ, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಇದೇ 23ರಿಂದ ಎಲ್ಲ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು ಕರ್ತವ್ಯವನ್ನು ಸ್ಥಗಿತಗೊಳಿಸಿ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.