ADVERTISEMENT

ಕೋವಿಡ್‌-19 | ಚಿಕಿತ್ಸಾ ಶುಲ್ಕ ತಗ್ಗಿಸಲು ಸೂಚನೆ

ಖಾಸಗಿ ಆಸ್ಪತ್ರೆಗಳ ಕ್ರಮಕ್ಕೆ ಸರ್ಕಾರ ಗರಂ l ಆಯುಷ್ಮಾನ್‌ ಕಾರ್ಡ್‌ ಇದ್ದವರಿಂದಲೂ ಕಡಿಮೆ ಶುಲ್ಕ ‍ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 20:57 IST
Last Updated 8 ಜೂನ್ 2020, 20:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌–19ಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಶುಲ್ಕ ನಿಗದಿಪಡಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ಸಮಿತಿ ಸೋಮವಾರ ಇಲ್ಲಿ ಸಭೆ ನಡೆಸಿದ್ದು, ಆಯುಷ್ಮಾನ್ ಭಾರತ್‌ ಆರೋಗ್ಯ ಕರ್ನಾಟಕ (ಎಬಿ–ಎಆರ್‌ಕೆ) ಕಾರ್ಡ್‌ ಹೊಂದಿರುವವರಿಗೆ ಬಿಪಿಎಲ್‌ ಕಾರ್ಡ್‌ದಾರರಷ್ಟೇ ಶುಲ್ಕ ಪಡೆಯಬೇಕು ಹಾಗೂ ಸಾಮಾನ್ಯ ರೋಗಿಗಳ ವೆಚ್ಚವನ್ನು ಶೇ 20ರಷ್ಟು ತಗ್ಗಿಸಬೇಕು ಎಂದು ತಿಳಿಸಿದೆ.

ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಇತರ ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆಗಳು ನಿಗದಿಪಡಿಸಿರುವ ದರಕ್ಕಿಂತ ಅಧಿಕ ದರವನ್ನು ರಾಜ್ಯದಲ್ಲಿ ನಿಗದಿಪಡಿಸಿರುವನ್ನು ಗಮನಿಸಿ ಈ ಸೂಚನೆ ನೀಡಿತು.

ಜನರಲ್‌ ವಾರ್ಡ್‌ ಶುಲ್ಕವನ್ನು ಖಾಸಗಿಯವರು ನಿಗದಿಪಡಿಸಿದ ₹ 15 ಸಾವಿರದ ಬದಲಿಗೆ ₹ 12 ಸಾವಿರ, ಆಮ್ಲಜನಕ ಇರುವ ವಾರ್ಡ್‌ ದರ ₹ 20 ಸಾವಿರದ ಬದಲಿಗೆ ₹ 15 ಸಾವಿರ, ಐಸಿಯು ವಾರ್ಡ್‌ ದರ ₹ 25 ಸಾವಿರದ ಬದಲಿಗೆ ₹ 20 ಸಾವಿರ ಹಾಗೂ ವೆಂಟಿಲೇಟರ್‌ ಹೊಂದಿರುವ ಐಸಿಯು ವಾರ್ಡ್‌ಗೆ ₹ 35 ಸಾವಿರದ ಬದಲಿಗೆ ₹ 25 ಸಾವಿರ ದರ ನಿಗದಿಪಡಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ADVERTISEMENT

‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎನ್‌.ಟಿ.ಅಬ್ರೂ ಅವರು ದರ ನಿಗದಿ ಸಮಿತಿಯ ನೇತೃತ್ವ ವಹಿಸಿದ್ದು, ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ಪಿ.ಜಿ.ಗಿರೀಶ್‌, ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ್‌, ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ವಿವಿಧ ಆಸ್ಪತ್ರೆಗಳ ಜಿಲ್ಲಾ ಶಸ್ತ್ರಚಿಕಿತ್ಸಕರು ಇದರ ಸದಸ್ಯರು‘ ಎಂದು ಜಾವೇದ್‌ ಅಖ್ತರ್‌ ತಿಳಿಸಿದ್ದಾರೆ.‌

ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಕಾಳಜಿ ಸಂಘಟನೆಗಳ ಒಕ್ಕೂಟ (ಎಫ್‌ಎಚ್‌ಎಕೆ) ಪ್ರತಿನಿಧಿಸಿತ್ತು. ಇದೀಗ ಶುಲ್ಕ ನಿಗದಿ ಪ್ರಸ್ತಾಪವನ್ನು ಸರ್ಕಾರ ಅಂತಿಮವಾಗಿ ಒಪ್ಪಿಕೊಳ್ಳುವುದು ಬಾಕಿ ಇದೆ.

‘ಕೋವಿಡ್‌ ರೋಗಿಗಳ ಚಿಕಿತ್ಸೆಗೆ ₹ 3.5 ಲಕ್ಷ ಬೇಕು ಎಂದು ಸರ್ಕಾರವೇ ಒಪ್ಪಿಕೊಂಡಿದೆ. ನಾವು ಅದಕ್ಕಿಂತಲೂ ಕಡಿಮೆ ಶುಲ್ಕವನ್ನೇ ನಿಗದಿಪಡಿಸಿದ್ದೇವೆ. ಆದರೂ ಇನ್ನೂ ಶೇ 20ರಷ್ಟು ಶುಲ್ಕ ಕಡಿತ ಮಾಡಬೇಕೆಂದು ಸರ್ಕಾರ ಏಕೆ ಹೇಳುತ್ತಿದೆಯೋ ಗೊತ್ತಿಲ್ಲ. ನಾವು ಮಾತುಕತೆಗೆ ಸಿದ್ಧ ಇದ್ದೇವೆ’ ಎಂದು ಎಫ್‌ಎಚ್‌ಎಕೆ ಸಂಘಟನೆಯ ಪ್ರಧಾನ ಸಂಚಾಲಕ ಡಾ.ನಾಗೇಂದ್ರ ಸ್ವಾಮಿ ಹೇಳಿದರು.

ಎಫ್‌ಎಚ್‌ಎಕೆ ಸಂಘಟನೆಯು ಬಿಪಿಎಲ್‌ ರೋಗಿಗಳಿಗೆ ಕ್ರಮವಾಗಿ ₹ 5,200 (ಜನರಲ್‌ ವಾರ್ಡ್‌). ₹ 7,000 (ಆಮ್ಮಜನಕ ಸಹಿತ ವಾರ್ಡ್‌). ₹8,500 (ಐಸಿಯು) ಹಾಗೂ ₹ 10,000 (ವೆಂಟಿಲೇಟರ್ ಸಹಿತ ಐಸಿಯು) ದರ ನಿಗದಿಪಡಿಸಿದೆ.

‘ದೇಶದ ಲ್ಯಾಬ್‌ ಪೈಕಿ ಶೇ 10 ರಾಜ್ಯದಲ್ಲಿವೆ’
‘ದೇಶದಲ್ಲಿರುವ ಒಟ್ಟು ಕೋವಿಡ್ 19 ತಪಾಸಣಾ ಪ್ರಯೋಗಾಲಯಗಳ ಪೈಕಿ ಶೇ 10ರಷ್ಟು ಕರ್ನಾಟಕದಲ್ಲಿವೆ’ ಎಂದು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

‘ದೇಶದಲ್ಲಿ ಒಟ್ಟು 771 ಪ್ರಯೋಗಾಲಯಗಳಿವೆ. ಈ ಪೈಕಿ 70 ಪ್ರಯೋಗಾಲಯಗಳು (41 ಸರ್ಕಾರಿ ಮತ್ತು 29 ಖಾಸಗಿ) ರಾಜ್ಯದಲ್ಲಿವೆ. ಕೊರೊನಾ ವಿರುದ್ಧ ನಾವು ಸಶಕ್ತರಾಗಿ ಸಮರ ಮುಂದುವರಿಸಿದ್ದೇವೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಆರೋಪಿಗೆ ಕೊರೊನಾ; ಬೈಯಪ್ಪನಹಳ್ಳಿ ಠಾಣೆ ಸೀಲ್‌ಡೌನ್
ಸುಲಿಗೆ ಆರೋಪದಡಿ ಬಂಧಿಸಲಾಗಿದ್ದ ಆರೋಪಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಬೈಯಪ್ಪನಹಳ್ಳಿ ಠಾಣೆಯನ್ನು ಸೋಮವಾರ ಸೀಲ್‌ಡೌನ್ ಮಾಡಲಾಗಿದೆ.

ಜೀವನ್‌ಬಿಮಾನಗರ ಬಳಿಯ ನಿವಾಸಿಯಾದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಠಾಣೆಯ ಪಿಎಸ್‌ಐ ಸೇರಿ 17 ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಸುಲಿಗೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದರು. ಮೂವರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದರು. ಅವರ ವರದಿ ಸೋಮವಾರ ಬಂದಿದ್ದು, ಒಬ್ಬಾತನಲ್ಲಿ ಸೋಂಕು ಇರುವುದು ಖಾತ್ರಿಯಾಗಿದೆ. ಇನ್ನಿಬ್ಬರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

‘ಆರೋಪಿ ಠಾಣೆಯಲ್ಲಿದ್ದ. ಹೀಗಾಗಿ, ತಾತ್ಕಾಲಿಕವಾಗಿ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

18 ಮಂದಿಗೆ ಸೋಂಕು ದೃಢ
ನಗರದಲ್ಲಿ ಮತ್ತೆ 18 ಮಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ. ಸೋಂಕಿತರಲ್ಲಿ ಮೂವರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕಳೆದ 30 ದಿನಗಳಲ್ಲಿ ಒಟ್ಟು 31 ಮಂದಿ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಸೋಂಕು ತಗುಲಿದವರಲ್ಲಿ ಸಾವಿಗೀಡಾಗುವವರ ಪ್ರಮಾಣವೂ ಹೆಚ್ಚಳವಾಗಿದೆ. ಸಾವು ಸಂಭವಿಸಿದ ಬಹುತೇಕ ಪ್ರಕರಣಗಳಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನು ತಡವಾಗಿ ನಡೆಸಲಾಗಿದೆ. ಇವರು ಬದುಕಿದ್ದಾಗ ಗಂಟಲ ದ್ರವ ಪರೀಕ್ಷೆ ನಡೆದಿಲ್ಲ ಎಂಬುದು ಇಲ್ಲಿ ಗಮನಾರ್ಹ.

ರಾಜ್ಯ ಕೋವಿಡ್‌ ವಾರ್‌ ರೂಮ್‌ ಸೋಮವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ ಒಟ್ಟು 46,383 ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 44,104 ಮಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ. 1,830 ಮಂದಿಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಸೋಮವಾರ ಸೋಂಕು ಪತ್ತೆಯಾದ ಬಹುತೇಕರು ಈ ಹಿಂದೆ ಸೋಂಕು ತಗುಲಿದ್ದವರ ನೇರ ಸಂಪರ್ಕಕ್ಕೆ ಬಂದವರು. ಕಳೆದ ವಾರ ಮೃತಪಟ್ಟ ಮಹಿಳೆಯ ಸಂಪರ್ಕದಿಂದ ಇಬ್ಬರಿಗೆ ಸೋಂಕು ತಗುಲಿದೆ. ಪಿ–4220 ಸಂಖ್ಯೆಯ ಈ ರೋಗಿಯ ಸಂಪರ್ಕದಿಂದಾಗಿ ಆರು ಮಂದಿಗೆ ಸೋಂಕು ತಗುಲಿದೆ (ವಿ.ವಿ.ಪುರದ ನಿವಾಸಿಯಾಗಿದ್ದ 65 ವರ್ಷದ ಈ ಮಹಿಳೆ ಜೂನ್‌ 3ರಂದು ಕೊನೆಯುಸಿರೆಳೆದಿದ್ದರು). ಪಾರ್ವತಿಪುರ ಹಾಗೂ ಕಲಾಸಿಪಾಳ್ಯದಲ್ಲಿ ತಲಾ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಬಸವೇಶ್ವರನಗರ 45 ವರ್ಷದ ಮಹಿಳೆಗೆ ಪಿ–2519 ಸಂಖ್ಯೆಯ (61 ವರ್ಷದ ಈ ಮಹಿಳೆ ಜೂನ್‌ 6ರಂದು ಮೃತಪಟ್ಟಿದ್ದರು) ರೋಗಿಯ ಸಂಪರ್ಕದಿಂದ ಸೋಂಕು ಹರಡಿದೆ. ಈ ರೋಗಿಯಿಂದ ಇದುವರೆಗೆ ಒಟ್ಟು ಐವರಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.