ADVERTISEMENT

ಬೆಂಗಳೂರು ನಗರ: ಒಂದೇ ದಿನ 173 ಮಂದಿಗೆ ಕೊರೊನಾ ಸೋಂಕು

ನಗರದಲ್ಲಿ ಸಾವಿಗೀಡಾದವರ ಸಂಖ್ಯೆ 78ಕ್ಕೆ ಏರಿಕೆ l ಕುಮಾರಕೃಪಾ ಅತಿಥಿ ಗೃಹ ಈಗ ಕೋವಿಡ್ ಕೇರ್ ಸೆಂಟರ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 20:51 IST
Last Updated 24 ಜೂನ್ 2020, 20:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಬುಧವಾರ ಒಂದೇ ದಿನ 173 ಮಂದಿಗೆ ಸೋಂಕು ತಗುಲಿದ್ದು, ಕೋವಿಡ್ ಪೀಡಿತರ ಸಂಖ್ಯೆ 1678ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಮತ್ತೆ ಐವರು ಮೃತಪಟ್ಟಿದ್ದು, ಸಾವಿಗೀಡಾದವರ ಸಂಖ್ಯೆ 78ಕ್ಕೆ ಏರಿದೆ. 41 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ 475ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,124ಕ್ಕೆ ಏರಿಕೆಯಾಗಿದ್ದು, 63 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬುಧವಾರ ವರದಿಯಾದಪ್ರಕರಣಗಳಲ್ಲಿ 71 ಮಂದಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿದ್ದರು. 59 ಮಂದಿಗೆ ಹೇಗೆ ಸೋಂಕು ತಗುಲಿತು ಎಂಬುದು ಪತ್ತೆಯಾಗಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದವರು ಕೂಡ ಸೋಂಕಿತರಾಗಿ ಆಸ್ಪತ್ರೆ ಸೇರಿದ್ದಾರೆ.

ADVERTISEMENT

ಕತಾರ್‌ನಿಂದ ವಾಪಸ್‌ ಆಗಿದ್ದ ನಾಲ್ವರು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿದ್ದರು. ಅವರನ್ನು ಮನೆಗೆ ಕಳುಹಿಸುವ ಮೊದಲು ನಡೆಸಿದ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಸೋಂಕು ತಗುಲಿದೆ. ರಾಯಚೂರಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿರುವ ಜೆ.ಪಿ. ನಗರದ 30 ವರ್ಷದ ಪುರಷ ಹಾಗೂ 24 ವರ್ಷದ ಮಹಿಳೆ ಕೋವಿಡ್ ಪೀಡಿತರಾಗಿದ್ದಾರೆ. ವಸಂತಪುರದಲ್ಲಿ ರೋಗಿಯೊಬ್ಬರ ಸಂಪರ್ಕದಿಂದ ಮೂರು ವರ್ಷದ ಬಾಲಕಿ ಸೇರಿದಂತೆ ಮತ್ತೆ ಇಬ್ಬರು ಸೋಂಕಿತರಾಗಿದ್ದಾರೆ.

ಅರ್ಕಾವತಿ ಬಡಾವಣೆಯಲ್ಲಿ 56 ವರ್ಷದ ಪುರುಷನಿಗೆ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಕಾಯಿಲೆ ದೃಢಪಟ್ಟಿದೆ. ಗೊಲ್ಲರಹಟ್ಟಿಯಲ್ಲಿ ರೋಗಿಯೊಬ್ಬರ ಸಂಪರ್ಕದಿಂದ 5 ವರ್ಷದ ಬಾಲಕ ಸೇರಿದಂತೆ ಆರು ಮಂದಿ ಸೋಂಕಿತರಾಗಿದ್ದಾರೆ. ಚಿಕ್ಕಗೊಲ್ಲರಹಟ್ಟಿಯಲ್ಲಿ 15, 12 ವರ್ಷದ ಬಾಲಕರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೆಜಿಸ್ಟಿಕ್‌ನ ಲಾಡ್ಜ್‌ನಲ್ಲಿ 35 ವರ್ಷದ ಪುರುಷ, 31 ವರ್ಷದ ಪುರುಷ , ಶಂಕರಪುರದ ಲಾ್ಡ್ಜ್‌ನಲ್ಲಿ 33 ವರ್ಷದ ಪುರುಷ ಹಾಗೂ ಯಶವಂತಪುರದ ಲಾಡ್ಜ್‌‌ನಲ್ಲಿ 33 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಇವರನ್ನು ಕಾರ್ಯಕರ್ತರನ್ನಾಗಿ ಆರೋಗ್ಯ ನಿಯೋಜಿಸಿತ್ತು.

ಮತ್ತಷ್ಟು ಪ್ರದೇಶಗಳು ಸೀಲ್‌ಡೌನ್‌

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಐದು ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಿದ್ದ ಬಿಬಿಎಂಪಿ, ಈಗ ಮತ್ತಷ್ಟು ಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸೀಲ್‌ಡೌನ್‌ ಮಾಡಿ ಅಧಿಸೂಚನೆ ಹೊರಡಿಸಿದೆ. ಬುಧವಾರದಿಂದಲೇ (ಜೂನ್‌ 24) ಈ ಆದೇಶ ಜಾರಿಗೆ ಬಂದಿದೆ ಎಂದು ಅದು ತಿಳಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್, ‘ಪ್ರಮುಖವಾಗಿ ಮಾರುಕಟ್ಟೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಕುಮಾರಕೃಪಾದಲ್ಲಿ ಚಿಕಿತ್ಸೆ

ಕುಮಾರಕೃಪಾ ಅತಿಥಿ ಗೃಹ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾಗಲಿದ್ದು, ಸಂಸದರು, ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು ಹಾಗೂ ಹಿರಿಯ ಶ್ರೇಣಿಯ ಅಧಿಕಾರಿಗಳು ಕೊರೊನಾ ಸೋಂಕಿತರಾದರೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಅತಿಥಿಗೃಹದ ಒಂದು ವಿಭಾಗದಲ್ಲಿ 100 ಕೊಠಡಿಗಳನ್ನು ಮಾತ್ರ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಬೇಕು. ಉಳಿದ ವಿಭಾಗದ ಕೊಠಡಿಗಳಲ್ಲಿ ನೋಂದಣಿ ಶೇ 30 ರಷ್ಟು ಮೀರದಂತೆ ಕ್ರಮ ವಹಿಸಬೇಕು. ಜನರು ಗುಂಪುಗೂಡದಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶುಶ್ರೂಷಕಿಗೆ ಸೋಂಕು

ನೆಪ್ರೊ ಯುರಾಲಜಿ ಸಂಸ್ಥೆಯ ಶುಶ್ರೂಷಕಿ ಕೊರೊನಾ ಸೋಂಕಿತರಾಗಿದ್ದಾರೆ. ಕೆಲ ದಿನಗಳ ಹಿಂದೆ ಅವರ ಕುಟುಂಬದ ಸದಸ್ಯರೊಬ್ಬರು ಸೋಂಕಿತರಾಗಿದ್ದರು. ಇದರಿಂದಾಗಿ ಅವರು ಮನೆ ಕ್ವಾರಂಟೈನ್‌ಗೆ ಒಳಗಾಗಿದ್ದರು.

‘ಒಂದು ವಾರದಿಂದ ಸೋಂಕಿತ ಶುಶ್ರೂಷಕಿ ಆಸ್ಪತ್ರೆಗೆ ಬಂದಿರಲಿಲ್ಲ. ಇದರಿಂದಾಗಿ ಅವರ ಸಂಪರ್ಕಕ್ಕೆ ಯಾವುದೇ ವೈದ್ಯರು ಹಾಗೂ ಶುಶ್ರೂಷಕರು ಬಂದಿಲ್ಲ. ವೈದ್ಯಕೀಯ ಚಿಕಿತ್ಸೆಯನ್ನು ಯಥಾ ಪ್ರಕಾರ ಮುಂದುವರೆಸಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಕೇಶವಮೂರ್ತಿ ತಿಳಿಸಿದರು.

ಸಿಐಡಿ ಸಬ್ ಇನ್‌ಸ್ಪೆಕ್ಟರ್‌ಗೂ ಕೊರೊನಾ ಸೋಂಕು

ಪೊಲೀಸ್‌ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಬುಧವಾರ ರಾತ್ರಿ ಬಂದ ವರದಿ ಪ್ರಕಾರ ಸಿಐಡಿಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಅಲ್ಲದೆ, ಹೈಗ್ರೌಂಡ್ಸ್ ಸಂಚಾರ ಠಾಣೆಯ ಎಎಸ್ಐ ಹಾಗೂ ಸಿಎಆರ್‌ನ ಕೇಂದ್ರ ಸ್ಥಾನದಲ್ಲಿರುವ ಇಬ್ಬರು ಸಿಬ್ಬಂದಿಗೂ ಸೋಂಕು ಪತ್ತೆಯಾಗಿದ್ದು, 50ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.‌‌ ವಿಲ್ಸನ್ ಗಾರ್ಡನ್ ಸಂಚಾರ ಠಾಣೆಯಲ್ಲಿ ಮತ್ತೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಠಾಣೆಯನ್ನು ಮತ್ತೆ ಸೀಲ್‌ಡೌನ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.