ADVERTISEMENT

ಕೋವಿಡ್‌: 1912 ಸಹಾಯವಾಣಿ ಬಲವರ್ಧನೆ

ಯಶವಂತಪುರದಲ್ಲಿ ಹೆಚ್ಚುವರಿ ಕಾಲ್ ಸೆಂಟರ್‌ ಆರಂಭ

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:55 IST
Last Updated 14 ಮೇ 2021, 19:55 IST
ಯಶವಂತಪುರದಲ್ಲಿ ಸ್ಥಾಪಿಸಿರುವ ಕಾಲ್‌ ಸೆಂಟರ್‌ ಅನ್ನು ಸಚಿವ ಅರವಿಂದ ಲಿಂಬಾವಳಿ ಶುಕ್ರವಾರ ಪರಿಶೀಲಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ಶಾಸಕ ಮುನಿರತ್ನ ಇದ್ದರು -ಪ್ರಜಾವಾಣಿ ಚಿತ್ರ
ಯಶವಂತಪುರದಲ್ಲಿ ಸ್ಥಾಪಿಸಿರುವ ಕಾಲ್‌ ಸೆಂಟರ್‌ ಅನ್ನು ಸಚಿವ ಅರವಿಂದ ಲಿಂಬಾವಳಿ ಶುಕ್ರವಾರ ಪರಿಶೀಲಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ಶಾಸಕ ಮುನಿರತ್ನ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ ಮಾಡಲು ಬಿಬಿಎಂಪಿಯ ಸಹಾಯವಾಣಿಯನ್ನು ( 1912) ಬಲವರ್ಧನೆ ಮಾಡಲಾಗುತ್ತಿದೆ. ಹೆಚ್ಚುವರಿ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿ ಅವುಗಳನ್ನೂ ಈ ಸಹಾಯವಾಣಿಗೆ ಜೋಡಿಸಲಾಗುತ್ತಿದೆ.

ಯಶವಂತಪುರದಲ್ಲಿ ಬಿಬಿಎಂಪಿ ವತಿಯಿಂದ ಸ್ಥಾಪಿಸಿರುವ ಸಹಾಯವಾಣಿಯ (1912) ಹೆಚ್ಚುವರಿ ಕೇಂದ್ರವನ್ನು ಸಚಿವ ಅರವಿಂದ ಲಿಂಬಾವಳಿ ಶುಕ್ರವಾರ ಉದ್ಘಾಟಿಸಿದರು.

ಈ ಹಿಂದೆ 1912 ಸಹಾಯವಾಣಿ 60 ಸಂಪರ್ಕ ಮಾರ್ಗಗಳನ್ನು ಹೊಂದಿತ್ತು. ಈಗ ಅದಕ್ಕೆ ಹೆಚ್ಚುವರಿಯಾಗಿ 70 ಮಾರ್ಗಗಳನ್ನು ಸೇರಿಸಲಾಗಿದೆ. ಈವರೆಗೂ 1912 ಸಹಾಯವಾಣಿಗೆ ಕರೆ ಮಾಡಿದಾಗ ಸಂಪರ್ಕ ಪಡೆಯಲು ಐದಾರು ನಿಮಿಷ ಕಾಯಬೇಕಾಗುತ್ತಿತ್ತು. ಆದರೆ, ಈಗ ಹೆಚ್ಚುವರಿ ಸಂಪರ್ಕ ಮಾರ್ಗಗಳನ್ನು ಸೇರ್ಪಡೆಗೊಳಿಸಿರುವುದರಿಂದ ಕರೆ ಮಾಡಿದ ಕೂಡಲೇ ಸೇವೆ ಲಭ್ಯವಾಗಲಿದೆ. 10 ವೈದ್ಯರು ಹಾಗೂ 130 ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಮೂರು ಪಾಳಿಗಳಲ್ಲಿ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ADVERTISEMENT

ಕೋವಿಡ್‌ ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗಿಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ಹೊಸ ರೋಗಿಗಳನ್ನು ದಾಖಲಿಸಲು ಇದು ಅನುಕೂಲ ಕಲ್ಪಿಸಲಿದೆ. ಅಲ್ಲದೇ, ಹಾಸಿಗೆ ಲಭ್ಯತೆಯ ನಿಖರ ಮಾಹಿತಿ, ಹಾಸಿಗೆಗಳ ಹಂಚಿಕೆಯಾಗಿರುವ ಬಗ್ಗೆ ವಾಸ್ತವ ವರದಿ ಪಡೆಯಲೂ ನೆರವಾಗುತ್ತದೆ.

‘ಈ ಕಾಲ್ ಸೆಂಟರ್‌ನಲ್ಲಿ ವೈದರೇ ಖುದ್ದಾಗಿ ರೋಗಿಗಳ ಅಥವಾ ಅವರ ಬಂಧುಗಳ ಜೊತೆ ಮಾತನಾಡಿ ಅಗತ್ಯ ವೈದ್ಯಕೀಯ ಸಲಹೆ ನೀಡಲಿದ್ದಾರೆ. ತುರ್ತು ಚಿಕಿತ್ಸೆ ಅಗತ್ಯವಿರುವ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಾಗಲು ನೇರವಾಗಲಿದ್ದಾರೆ. ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆಯ ವಾಸ್ತವ ಸ್ಥಿತಿ ಪರಿಶೀಲನೆಗೂ ನೆರವಾಗಲಿದೆ. ಇದು ಚಿಕಿತ್ಸಾ ನಿರ್ಧಾರ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ’ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

‘ಈ ಕಾಲ್ ಸೆಂಟರ್‌ ಬಿಬಿಎಂಪಿಯ ಇತರ ವಲಯಗಳದ್ದೂ ಸೇರಿದಂತೆ ಒಟ್ಟು ಒಂಬತ್ತು ವಾರ್ ರೂಮ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಲಿದೆ. ಇದರಿಂದ ವಾರ್ ರೂಮ್ ಮತ್ತು ಕಾಲ್ ಸೆಂಟರ್ ಗಳ ಕಾರ್ಯನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆಯ ವಾಸ್ತವ ಸ್ಥಿತಿಗತಿಗಳನ್ನು ತಿಳಿಯಲು ಈ ಕಾಲ್ ಸೆಂಟರ್ ಮೂಲಕ ಕರೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.