ADVERTISEMENT

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ₹ 3 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 14:03 IST
Last Updated 9 ಅಕ್ಟೋಬರ್ 2020, 14:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಐಪಿಎಲ್‌ ಕ್ರಿಕೆಟ್ ಪಂದ್ಯಾವಳಿ ಮೇಲೆ ಬೆಟ್ಟಿಂಗ್ ಆಡಿಸುತ್ತಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕೆ.ಜಿ. ಹಳ್ಳಿ ಇದಾಯತ್ ನಗರದ ಇಮ್ರಾನ್ ಪಾಷಾ (25), ರಾಣಸಿಂಗ್ ಪೇಟ್‌ದ ಮೊಹಮ್ಮದ್ ಇರ್ಫಾನ್ (27), ಗುಡ್ಡದಹಳ್ಳಿ ನೆಹರು ರಸ್ತೆಯ ಮುಜಾಮಿಲ್ ಅಹಮ್ಮದ್ (21) ಹಾಗೂ ಸರ್ವಜ್ಞ ನಗರದ ರೋಮನ್ ವಿಮಲ್‌ರಾಜ್ (29) ಬಂಧಿತರು. ಅವರಿಂದ ₹ 3 ಲಕ್ಷ ನಗದು ಹಾಗೂ 4 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಐಪಿಎಲ್‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅ. 7ರಂದು ನಡೆದಿದ್ದ ಪಂದ್ಯದ ಮೇಲೆ ಆರೋಪಿಗಳು ಬೆಟ್ಟಿಂಗ್ ಆಡಿಸಿದ್ದರು. ಮೊಬೈಲ್‌ ಮೂಲಕ ಸ್ಕೋರ್ ಹಾಗೂ ಪಂದ್ಯದ ಮಾಹಿತಿ ಪಡೆದು ಬೆಟ್ಟಿಂಗ್ ನಡೆಸುತ್ತಿದ್ದರು. ಸೋಲು ಹಾಗೂ ಗೆಲುವು ಲೆಕ್ಕಾಚಾರದಲ್ಲೂ ಹಣ ಕಟ್ಟಿಸಿಕೊಳ್ಳುತ್ತಿದ್ದರು.’

ADVERTISEMENT

‘ಬೆಟ್ಟಿಂಗ್‌ನಲ್ಲಿ ಗೆದ್ದವರಿಗೆ ಹಣ ಕೊಡಲು ಹಾಗೂ ಸೋತವರಿಂದ ಹಣ ಪಡೆಯಲು ಆರೋಪಿಗಳೇ ಹೋಗುತ್ತಿದ್ದರು. ಇತ್ತೀಚೆಗೆ ಆರೋಪಿಗಳು ಯಶವಂತಪುರ ಆರ್‌ಟಿಒ ಕಚೇರಿ ಬಳಿ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು. ಅವರ ವಿರುದ್ಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದೂ ಅವರು ತಿಳಿಸಿದರು.

₹82 ಸಾವಿರ ಜಪ್ತಿ; ಯಶವಂತಪುರ ಠಾಣೆ ವ್ಯಾಪ್ತಿಯ ಅಕ್ಕಿಯಪ್ಪ ಗಾರ್ಡನ್‌ ಬಳಿ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ ಆರೋಪಿ ರಾಜಶೇಖರ್ (37) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ರಾಜಶೇಖರ್, ಐಪಿಎಲ್ ಆರಂಭವಾದಾಗಿನಿಂದ ಬೆಟ್ಟಿಂಗ್‌ನಲ್ಲಿ ತೊಡಗಿದ್ದ. ಆತನಿಂದ ₹82 ಸಾವಿರ ನಗದು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.