ಬೆಟ್ಟಿಂಗ್ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಆನ್‌ಲೈನ್‌ನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಹಾಗೂ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದ ಬುಕ್ಕಿಗಳು ಹಾಗೂ ಮಧ್ಯವರ್ತಿಗಳನ್ನು ಸಿಸಿಬಿ ಪೊಲೀಸರು(ವಿಶೇಷ ತನಿಖಾ ತಂಡ) ಬಂಧಿಸಿದ್ದಾರೆ.
ನಗರದ ಒಂಬತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಪ್ರಿಲ್ 2ರಿಂದ 18ರ ವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
ಬಂಧಿತ ಬುಕ್ಕಿಗಳು ಹಾಗೂ ಮಧ್ಯವರ್ತಿಗಳು ಬೆಟ್ಟಿಂಗ್‌ಗೆ ಬಳಸುತ್ತಿದ್ದ ₹2 ಕೋಟಿಗೂ ಹೆಚ್ಚು ಮೌಲ್ಯದ ಬೆಟ್ಟಿಂಗ್ ಚಿಪ್ಸ್, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿಕೊಂಡಿದ್ದ 50 ಟಿಕೆಟ್ ಹಾಗೂ ನಗದು, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಆರೋಪಿಗಳು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದ ಹಣವನ್ನು ಪತ್ತೆಹಚ್ಚಿ ವಹಿವಾಟು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಸಿಟಿ ಮಾರುಕಟ್ಟೆ ಠಾಣೆ, ಸುಬ್ರಮಣ್ಯಪುರ, ಸಿ.ಕೆ.ಅಚ್ಚುಕಟ್ಟು, ಜೀವನ್ ಬಿಮಾ ನಗರ, ಯಲಹಂಕ, ಕಬ್ಬನ್ ಪಾರ್ಕ್, ಕೋಣನಕುಂಟೆ, ಬ್ಯಾಡರಹಳ್ಳಿ, ಬಸವೇಶ್ವರನಗರ ಸೇರಿ ಒಂಬತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.
‘ಆರೋಪಿಗಳು ಕೆಲವು ಮೂಲಗಳಿಂದ ಟಿಕೆಟ್ ಪಡೆದುಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಹೆಚ್ಚಿನ ಬೆಲೆಗೆ ಕ್ರಿಕೆಟ್ ಅಭಿಮಾನಿಗಳಿಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದರು.
ಪಂಟರ್‌ಗಳಿಗೆ ಮಾಹಿತಿ ರವಾನೆ: ಇನ್ನೂ ಕೆಲವು ಆರೋಪಿಗಳು ಐಪಿಎಲ್ ಪಂದ್ಯದ ಆರಂಭಕ್ಕೂ ಮುನ್ನ ಲಾಡ್ಜ್‌ನಲ್ಲಿ ಕೊಠಡಿ ಪಡೆದು ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು. ಅವರನ್ನೂ ವಶಕ್ಕೆ ಪಡೆದು ಬಂಧಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕುಳಿತು ಪಂಟರ್‌ಗಳಿಗೆ ಪ್ರತಿ ಬಾಲ್‌ನ ಮಾಹಿತಿ ರವಾನೆ ಮಾಡುತ್ತಿದ್ದ ಮಧ್ಯವರ್ತಿಗಳನ್ನೂ ಬಂಧಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಮೈದಾನದಲ್ಲಿ ಕುಳಿತು ವೀಕ್ಷಿಸುವ ಪಂದ್ಯಕ್ಕೂ ಹಾಗೂ ಅದೇ ಪಂದ್ಯದ ಟಿ.ವಿ ನೇರ ಪ್ರಸಾರಕ್ಕೂ ಕೆಲವು ಸೆಕೆಂಡ್ ಅಂತರ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು, ಪ್ರತಿ ಬಾಲ್‌ನ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಫೋರ್, ಸಿಕ್ಸ್, ನೋ ಬಾಲ್, ವೈಡ್ ಎಸೆತದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.