ADVERTISEMENT

ನಿವೃತ್ತ ಡಿಜಿಪಿ ಕೊಲೆ ಪ್ರಕರಣ | ಕೃತಿ ಆರೋಗ್ಯ ಸ್ಥಿರ: ವಿಚಾರಣೆಗೆ ಅನುಮತಿ

ಓಂ ಪ್ರಕಾಶ್ ಕೊಲೆ ಪ್ರಕರಣ: ಸಿಸಿಬಿ ಕಸ್ಟಡಿಗೆ ಪಲ್ಲವಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 0:30 IST
Last Updated 25 ಏಪ್ರಿಲ್ 2025, 0:30 IST
ಕೊಲೆಯಾದ ಓಂ ಪ್ರಕಾಶ್‌ 
ಕೊಲೆಯಾದ ಓಂ ಪ್ರಕಾಶ್‌    

ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ ಅವರ ಕೊಲೆ ಪ್ರಕರಣದ ಆರೋಪಿಯಾಗಿರುವ ಕೃತಿ ಮಾನಸಿಕವಾಗಿ ಸ್ಥಿರವಾಗಿದ್ದಾರೆ. ಅವರನ್ನು ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ನಿಮ್ಹಾನ್ಸ್‌ನ ವೈದ್ಯರು ವರದಿ ನೀಡಿದ್ದಾರೆ.

ಓಂ ಪ್ರಕಾಶ್ ಅವರ ಕೊಲೆ ಎಚ್‌ಎಸ್‌ಆರ್‌ ಲೇಔಟ್‌ನ ಮನೆಯಲ್ಲಿ ಏಪ್ರಿಲ್‌ 20ರಂದು ನಡೆದಿತ್ತು. ಓಂ ಪ್ರಕಾಶ್‌ ಅವರ ಪುತ್ರ ಕಾರ್ತಿಕೇಶ್ ನೀಡಿದ ದೂರು ಆಧರಿಸಿ ಪಲ್ಲವಿ–ಕೃತಿ (ತಾಯಿ ಹಾಗೂ ತಂಗಿ) ವಿರುದ್ಧ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದರು. ಪಲ್ಲವಿ ಅವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕೃತಿ ಅವರು ರಂಪಾಟ ಮಾಡಿದ್ದರಿಂದ ಅವರನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. 

‘ಕೃತಿ ಅವರಿಗೆ ನಿಮ್ಹಾನ್ಸ್‌ ವೈದ್ಯರು ಚಿಕಿತ್ಸೆ ನೀಡಿ ವಿವಿಧ ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರನ್ನು ಆಪ್ತ ಸಮಾಲೋಚನೆಗೂ ಒಳಪಡಿಸಿದ್ದಾರೆ. ಅವರಿಗೆ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆ ಇಲ್ಲ. ಅವರನ್ನು ವಿಚಾರಣೆಗೆ ಒಳಪಡಿಸಬಹುದು ಎಂಬುದಾಗಿ ವೈದ್ಯರು ವರದಿ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತಿ ಅವರನ್ನು ಆಸ್ಪತ್ರೆಯಲ್ಲೇ ಕೆಲವು ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಳ್ಳಲಾಗಿದೆ. ಮೂರು ದಿನ ಆಸ್ಪತ್ರೆಯಲ್ಲಿದ್ದ ಅವರು, ಅಲ್ಲಿಂದ ಮನೆಗೆ ಹೋಗಿದ್ದಾರೆ. ಅಗತ್ಯ ಬಿದ್ದರೆ ಮತ್ತೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತನಿಖಾಧಿಕಾರಿ ನೇಮಕ: ‘ಪ್ರಕರಣದ ತನಿಖೆಯನ್ನು ಸಿಸಿಬಿ ವರ್ಗಾವಣೆ ಮಾಡಲಾಗಿದ್ದು ತನಿಖಾಧಿಕಾರಿಯಾಗಿ ಸಿಸಿಬಿಯ ಎಸಿಪಿ ಧರ್ಮೇಂದ್ರ ಅವರನ್ನು ನೇಮಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಕೃತಿಯನ್ನು ಬಂಧಿಸಲು ಸಾಕ್ಷ್ಯಗಳು ಲಭಿಸಿಲ್ಲ. ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯ ಪೊಲೀಸರು ಕಡತವನ್ನು ಸಿಸಿಬಿ ಹಸ್ತಾಂತರ ಮಾಡಿದ್ದಾರೆ. ಆಕೆಯ ಪಾತ್ರವಿರುವುದು ಮುಂದಿನ ತನಿಖೆ ವೇಳೆ ಕಂಡುಬಂದರೆ ವಶಕ್ಕೆ ಪಡೆದುಕೊಳ್ಳುತ್ತೇವೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಹತ್ತು ಕಡೆ ಇರಿದು ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಮನೆಯಲ್ಲಿ ಜಪ್ತಿ ಮಾಡಿಕೊಂಡಿರುವ ಕೆಲವು ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರವಾನೆ ಮಾಡಲಾಗಿದ್ದು, ವರದಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಪ್ರಕರಣದ ಮೊದಲನೇ ಆರೋಪಿ ಪಲ್ಲವಿ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಬಾಡಿ ವಾರಂಟ್‌ ಮೇಲೆ ತಮ್ಮ ಕಸ್ಟಡಿಗೆ ನೀಡುವಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯವು ಏಳು ದಿನ ಸಿಸಿಬಿ ಕಸ್ಟಡಿಗೆ ನೀಡಿ ಗುರುವಾರ ಆದೇಶಿಸಿದೆ’ ಎಂದು ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.