ADVERTISEMENT

ಡ್ರಗ್ಸ್ ಪ್ರಕರಣ: ಮತ್ತಷ್ಟು ಮಂದಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 21:29 IST
Last Updated 11 ಮಾರ್ಚ್ 2021, 21:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಸಿನಿಮಾ ನಿರ್ಮಾಪಕ ಶಂಕರಗೌಡ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿರುವ ಪೂರ್ವ ವಿಭಾಗದ ಪೊಲೀಸರು, ಮತ್ತಷ್ಟು ಮಂದಿಯ ವಿಚಾರಣೆಗಾಗಿ ನೋಟಿಸ್ ನೀಡುವ ಸಾಧ್ಯತೆ ಇದೆ.

₹ 4 ಕೋಟಿ ಮೌಲ್ಯದ ಡ್ರಗ್ಸ್ ಸಮೇತ ನೈಜೀರಿಯಾ ಪ್ರಜೆಗಳು ಸೇರಿ ಹಲವರನ್ನು ಇತ್ತೀಚೆಗಷ್ಟೇ ಬಂಧಿಸಿದ್ದ ಪೊಲೀಸರು, ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಮಸ್ತಾನ್ ಚಂದ್ರ ಮನೆ ಹಾಗೂ ಶಂಕರಗೌಡ ಕಚೇರಿ ಮೇಲೆ ದಾಳಿ ಮಾಡಿದ್ದರು.

‘ಡ್ರಗ್ಸ್ ಪ್ರಕರಣದ ಆರೋಪಿಗಳ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಪತ್ತೆ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಮಸ್ತಾನ್ ಹಾಗೂ ಶಂಕರಗೌಡ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅದರ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಬಂಧಿತ ನೈಜೀರಿಯಾ ಪ್ರಜೆಗಳು ಹಾಗೂ ಇತರರ ಜೊತೆ ಒಡನಾಟ ಹೊಂದಿದ್ದ ಶಂಕರಗೌಡ, ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಅದೇ ಪಾರ್ಟಿಯಲ್ಲೇ ಡ್ರಗ್ಸ್ ಪೂರೈಕೆ ಆಗುತ್ತಿದ್ದ ಬಗ್ಗೆ ಮಾಹಿತಿ ಇದೆ’ ಎಂದೂ ಮೂಲಗಳು ತಿಳಿಸಿವೆ.

‘ಕೆಲ ನಟ, ನಟಿಯರು, ಉದ್ಯಮಿಗಳು ಹಾಗೂ ಗಣ್ಯರು ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದ ಮಾಹಿತಿಯೂ ಇದೆ. ಅದಕ್ಕೆ ಸಂಬಂಧಪಟ್ಟ ವಿಡಿಯೊ ಹಾಗೂ ಫೋಟೊಗಳು ಸಿಕ್ಕಿವೆ. ಅವುಗಳ ಪರಿಶೀಲನೆಯೂ ನಡೆಯುತ್ತಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.