ADVERTISEMENT

ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ: ಕಬ್ಬನ್ ಉದ್ಯಾನದಲ್ಲಿ ಅರಳಿದ ಪುಷ್ಪ ಲೋಕ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 16:15 IST
Last Updated 27 ನವೆಂಬರ್ 2025, 16:15 IST
ಕಬ್ಬನ್‌ ಉದ್ಯಾನದಲ್ಲಿ ನಡೆಯುತ್ತಿರುವ ಹೂಗಳ ಹಬ್ಬವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಕಬ್ಬನ್‌ ಉದ್ಯಾನದಲ್ಲಿ ನಡೆಯುತ್ತಿರುವ ಹೂಗಳ ಹಬ್ಬವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್   

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಬಣ್ಣ ಬಣ್ಣದ ಹೂವುಗಳಲ್ಲಿ ಅರಳಿದ ಹಂಪಿಯ ಕಲ್ಲಿನ ರಥ, ಹೂವು, ಹಾಗಲಕಾಯಿ ಹಾಗೂ ಕ್ಯಾಪ್ಸಿಕಮ್‌ನಲ್ಲಿ ರಚಿಸಿದ ಆನೆಯ ಕಲಾಕೃತಿಗಳು, ಹಳದಿ ಮತ್ತು ಕೆಂಪು ಬಣ್ಣದ ಹೂವುಗಳಲ್ಲಿ ಮೂಡಿಬಂದಿರುವ ಕರ್ನಾಟಕದ ನಕ್ಷೆಯ ಮಾದರಿ, ಅಲ್ಲಲ್ಲಿ ಜೋಡಿಸಿ ಇಟ್ಟಿರುವ ಹೂವಿನ ಕುಂಡಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ತೋಟಗಾರಿಕೆ ಇಲಾಖೆಯ ವತಿಯಿಂದ ಇದೇ ಮೊದಲ ಬಾರಿಗೆ ಕಬ್ಬನ್‌ ಉದ್ಯಾನದಲ್ಲಿ ಆಯೋಜಿಸಿರುವ ‘ಹೂವುಗಳ ಹಬ್ಬ’ಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗುರುವಾರ ಚಾಲನೆ ನೀಡಿದರು. ಪ್ರದರ್ಶನವು ಡಿಸೆಂಬರ್‌ 7ರವರೆಗೆ ನಡೆಯಲಿದೆ. 

ಕೆಂಪು ಮತ್ತು ಶ್ವೇತ ವರ್ಣದ ಹೂವುಗಳಲ್ಲಿ ರಚಿಸಿರುವ ಜಿಂಕೆ, ಹಳದಿ, ಕೆಂಪು  ಮತ್ತು ಕೇಸರಿ ಬಣ್ಣದ ಪುಷ್ಪಗಳಲ್ಲಿ ಮಾಡಿರುವ ಅನಾನಸ್, ಕೆಂಪು ವರ್ಣದ ಹೂವುಗಳಲ್ಲಿ ಅರಳಿದ ಸೇಬು ಹಣ್ಣು, ಹಳದಿ ವರ್ಣದ ಹೂವುಗಳಲ್ಲಿ ಬಳಸಿಕೊಂಡು ಸೂರ್ಯಕಾಂತಿ ಹೂವಿನ ಮಾದರಿಗಳ ಮುಂಭಾಗದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ನಿಂತುಕೊಂಡು ಫೋಟೊ ತೆಗೆಸಿಕೊಂಡು ಖುಷಿ ಪಟ್ಟರು. 

ADVERTISEMENT

ಬ್ಯಾಂಡ್‌ ಸ್ಟ್ಯಾಂಡ್‌ ಆವರಣದಲ್ಲಿರುವ ಕಾರಂಜಿಯಲ್ಲಿ ಕೆಂಪು ಮತ್ತು ಶ್ವೇತ ವರ್ಣದ ಪುಷ್ಪಗಳನ್ನು ಬಳಸಿಕೊಂಡು ಡಾಲ್ಫಿನ್‌ಗಳ ಮಾದರಿಯನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಪುಷ್ಪದಲ್ಲಿ ಅರಳಿ ಟ್ರ್ಯಾಕ್ಟರ್‌, ಕೋಳಿಯ ಮಾದರಿಗಳು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು.

20 ಸಾವಿರದಿಂದ 25 ಸಾವಿರ ಹೂ ಕುಂಡಗಳನ್ನು ಕಬ್ಬನ್‌ ಉದ್ಯಾನದ ಬ್ಯಾಂಡ್‌ ಸ್ಟ್ಯಾಂಡ್‌ ಹತ್ತಿರ, ಜಯಚಾಮರಾಜೇಂದ್ರ ಒಡೆಯರ್‌ ಪ್ರತಿಮೆ ಮುಂಭಾಗದಲ್ಲಿ ಹಾಗೂ ಬಾಲಭವನದ ಆವರಣದಲ್ಲಿ ಜೋಡಿಸಿ ಇಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಇರಲಿದೆ. ವಯಸ್ಕರಿಗೆ ₹30 ಹಾಗೂ ಮಕ್ಕಳಿಗೆ ₹10 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಸಮವಸ್ತ್ರ ಧರಿಸಿಕೊಂಡು ಬರುವ ಮಕ್ಕಳಿಗೆ ಉಚಿತ ಪ್ರವೇಶ ಇದೆ. 

‘ಮಕ್ಕಳನ್ನು ಆಕರ್ಷಿಸುವ ಮುಖ್ಯ ಉದ್ದೇಶದಿಂದ ಈ ಹೂಗಳ ಹಬ್ಬ ಆಯೋಜಿಸಲಾಗಿದೆ. ಇದರ ಜೊತೆಗೆ ಪ್ರತಿದಿನ ನೃತ್ಯ ಪ್ರದರ್ಶನ, ಸಂಗೀತ ಕಛೇರಿಗಳು, ಜಾನಪದ ಹಾಡು, ನೃತ್ಯ, ಡೊಳ್ಳು ಕುಣಿತ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು. 

‘ಮೊದಲ ದಿನ ವಯಸ್ಕರು, ಮಕ್ಕಳೂ ಸೇರಿ 33,500 ಮಂದಿ ಪುಷ್ಪ ಪ್ರದರ್ಶನ ವೀಕ್ಷಿಸಿದ್ದು, ₹18,500 ಪ್ರವೇಶ ಶುಲ್ಕ ಸಂಗ್ರಹವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. 

ಕಬ್ಬನ್‌ ಉದ್ಯಾನದಲ್ಲಿ ನಡೆಯುತ್ತಿರುವ ಹೂಗಳ ಹಬ್ಬದಲ್ಲಿ ತರಕಾರಿಗಳಲ್ಲಿ ರಚಿಸಿರುವ ಆನೆಯ ಮಾದರಿಯನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಕಬ್ಬನ್‌ ಉದ್ಯಾನದಲ್ಲಿ ಆಯೋಜಿಸಿದ್ದ ಹೂಗಳ ಹಬ್ಬ ವೀಕ್ಷಿಸಲು ಬಂದಿದ್ದ ಶಾಲಾ ಮಕ್ಕಳ ಕೈ ಕುಲುಕಿದ ಶಾಲಿನಿ ರಜನೀಶ್ ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಹೂವುಗಳಲ್ಲಿ ಅರಳಿದ ಜಿಂಕೆಯ ಮುಂಭಾಗದಲ್ಲಿ ಸಾರ್ವಜನಿಕರು ಫೋಟೊ ತೆಗೆಸಿಕೊಂಡರು ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಹೂಗಳ ಹಬ್ಬದಲ್ಲಿ ಬಳಕೆಯಾಗಿರುವ ಪುಷ್ಪಗಳನ್ನು ತ್ಯಾಜ್ಯವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕು.
– ಶಾಲಿನಿ ರಜನೀಶ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

ಶಸ್ತ್ರಾಸ್ತ್ರಗಳ ಪ್ರದರ್ಶನ

ಕಬ್ಬನ್‌ ಉದ್ಯಾನದ ಹೂವುಗಳ ಹಬ್ಬದಲ್ಲಿ ಬಿಎಸ್‌ಎಫ್‌ನ ವಿವಿಧ ಬಂದೂಕುಗಳು ಮಾನವ ಆತ್ಮಾಹುತಿ ಮಾಡಿಕೊಳ್ಳುವ ಮಾದರಿ ಸೈನ್ಯದಲ್ಲಿ ಬಳಸುವ ವಿವಿಧ ಪರಿಕರಗಳನ್ನು ವೀಕ್ಷಿಸಲು ಸಾರ್ವಜನಿಕರು ಸಾಲುಗಟ್ಟಿ ನಿಂತಿದ್ದರು. ಶಸ್ತ್ರಾಸ್ತ್ರಗಳ ಕುರಿತು ಮಕ್ಕಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಬಿಎಸ್‌ಎಫ್‌ ಸಿಬ್ಬಂದಿ ಉತ್ತರ ನೀಡುತ್ತಿದ್ದರು.

100ಕ್ಕೂ ಹೆಚ್ಚು ಮಳಿಗೆ ಸ್ಥಾಪನೆ  ಒಟ್ಟು 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್‌) 25 ಮಳಿಗೆಗಳಲ್ಲಿ ಸಿದ್ಧ ಸಿರಿಧಾನ್ಯ ಉತ್ಪನ್ನಗಳು ಉಪ್ಪಿನಕಾಯಿ ಚಟ್ನಿಪುಡಿ ಪುಳಿಯೋಗರೆ ಮಿಶ್ರಣ ಸಾಂಬಾರು ಪುಡಿ ಚಿಕ್ಕಿ ಒಣಹಣ್ಣು ಲಡ್ಡು ಗಾಣದ ಎಣ್ಣೆ ಖಾರದ ಪುಡಿ ರಾಗಿ ಮಾಲ್ಟ್‌ ಹುರಿಹಿಟ್ಟು ಜೋಳದ ರೊಟ್ಟಿ ಸಾವಯವ ಬೆಲ್ಲ ಗಿಣ್ಣು ಮೊದಲಾದ ಗುಣಮಟ್ಟದ ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.