ADVERTISEMENT

ಕ್ಯೂನೆಟ್‌ ಸಭೆಗೆ ಸೈಬರಾಬಾದ್ ಪೊಲೀಸರ ದಾಳಿ

ಕಂಪನಿ ಮುಖ್ಯಸ್ಥ ಪರಾರಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:00 IST
Last Updated 23 ಸೆಪ್ಟೆಂಬರ್ 2019, 19:00 IST

ಬೆಂಗಳೂರು: ‘ವಿಹಾನ್‌ ಡೈರೆಕ್ಟ್ ಸೆಲ್ಲಿಂಗ್‌’ ಹೆಸರಿನಲ್ಲಿ ಕಾರ್ಯಾಚರಿಸಿ, ನಗರದ ಏಳು ಸಾವಿರಕ್ಕೂ ಹೆಚ್ಚು ಜನರು ಸೇರಿದಂತೆ ದೇಶದಾದ್ಯಂತ ಸಾವಿರಾರು ಮಂದಿಗೆ ಕೋಟ್ಯಂತರ ಹಣ ವಂಚಿಸಿದ್ದ ‘ಕ್ಯೂನೆಟ್‌’ ಕಂಪನಿ ಯಲಹಂಕದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೂಡಿಕೆದಾರರ ಸಭೆಗೆ ತೆಲಂಗಾಣದ ಸೈಬರಾಬಾದ್ ಪೊಲೀಸರು ದಾಳಿ ನಡೆಸಿದರು.

ರಾಯಲ್ ಆರ್ಕಿಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಕಂಪನಿ ಹೂಡಿಕೆದಾರರ ಸಭೆ ಏರ್ಪಡಿಸಿರುವ ಕುರಿತು ಸೈಬರಾಬಾದ್ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಸೈಬರಾಬಾದ್ ಡಿಸಿಪಿ ರಾಘವೇಂದ್ರ ರೆಡ್ಡಿ ನೇತೃತ್ವದ ಪೊಲೀಸರ ತಂಡ ಸ್ಥಳೀಯ ಪೊಲೀಸರ ನೆರವು ಪಡೆದು ದಾಳಿ ನಡೆಸಿದೆ. ಪೊಲೀಸರು ತಲುಪುವಷ್ಟರಲ್ಲಿ ಸಭೆ ಆಯೋಜಿಸಿದ್ದ ಕಂಪನಿಯ ಮುಖ್ಯಸ್ಥ ಮತ್ತು ಇತರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕ್ಯೂನೆಟ್‌ ಕಂಪನಿ‌ ವಿರುದ್ಧ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಚೆನ್ನೈನ 172 ಮಂದಿ ಮೊದಲ ಬಾರಿಗೆ ಅಲ್ಲಿನ ಸ್ಥಳೀಯ ಠಾಣೆಯಲ್ಲಿ ಕಂಪನಿ ವಿರುದ್ಧ ದೂರು ನೀಡಿದ್ದರು. ತೆಲಂಗಾಣದ ಸೈಬರಾಬಾದ್ ಕಮಿಷನರೇಟ್ ವ್ಯಾಪ್ತಿಯಲ್ಲಿ 38ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ಕಂಪನಿಯ ವಂಚನೆ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಸೈಬರಾಬಾದ್ ಪೊಲೀಸರು, ಈ ಜಾಲದ 70 ಮಂದಿಯನ್ನು ಆಗಸ್ಟ್‌ನಲ್ಲಿ ಬಂಧಿಸಿದ್ದರು. ಬೆಂಗಳೂರಿನಲ್ಲಿ ಕಂಪನಿಯ ಗೋದಾಮು ಜಪ್ತಿ ಮಾಡಿ, ಬ್ಯಾಂಕ್ ಖಾತೆಯಲ್ಲಿನ ₹ 2.7 ಕೋಟಿ ಹಣ ಮುಟ್ಟುಗೋಲು ಹಾಕಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.