
ಬೆಂಗಳೂರು: ಸೈಬರ್ ಅಪರಾಧ ಪ್ರಕರಣಗಳು ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ‘ಭಯೋತ್ಪಾದಕರು ನಡೆಸುವ ಸ್ಫೋಟ ಹಾಗೂ ಸಂಚು ಪ್ರಕರಣಗಳಲ್ಲಿ ತಾವು ಭಾಗಿ ಆಗಿದ್ದೀರಿ’ ಎಂದು ಸಾರ್ವಜನಿಕರನ್ನು ಬೆದರಿಸುವ ‘ಹೊಸ ತಂತ್ರ’ವನ್ನು ಸೈಬರ್ ವಂಚಕರು ಬಳಸುತ್ತಿದ್ದಾರೆ. ಆ ಮೂಲಕ ನಾಗರಿಕರಿಂದ ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ.
‘ಡಿಜಿಟಲ್ ಅರೆಸ್ಟ್’, ಒಟಿಪಿ ದುರುಪಯೋಗ, ತಮ್ಮ ಹೆಸರಿನಲ್ಲಿ ಬಂದಿರುವ ಕೊರಿಯರ್‌ನಲ್ಲಿ ಡ್ರಗ್ಸ್ ಇದೆ, ಹೂಡಿಕೆಯಿಂದ ಹೆಚ್ಚಿನ ಲಾಭಾಂಶ ಬರಲಿದೆ ಎಂಬುದಾಗಿ ಇದುವರೆಗೂ ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದ ಸೈಬರ್ ಕಳ್ಳರು, ‘ಈಗ ಭಯೋತ್ಪಾದಕರ ನಂಟು ಹೊಂದಿದ್ದೀರಿ’ ಎಂದು ಬೆದರಿಸಲು ಆರಂಭಿಸಿದ್ದಾರೆ.
‘ವಿಧಾನಗಳನ್ನು ಪದೇ ಪದೇ ಬದಲಾವಣೆ ಮಾಡಿಕೊಂಡು ಸಾರ್ವಜನಿಕರಲ್ಲಿ ನಂಬಿಕೆ ಬರುವಂತೆ ಸೈಬರ್ ವಂಚಕರು ಮಾಡುತ್ತಿದ್ದಾರೆ. ಇದು ಕಾರ್ಯಾಚರಣೆಗೂ ಸವಾಲು, ಅಡ್ಡಿ ಆಗುತ್ತಿದೆ’ ಎಂದು ಸೈಬರ್ ಅಪರಾಧ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಕಳೆದೆರಡು ತಿಂಗಳಲ್ಲಿ ಈ ರೀತಿಯ ದೂರುಗಳು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಬರುತ್ತಿವೆ.
ತುರಹಳ್ಳಿ ರಸ್ತೆಯ ವೀರಾಂಜನೇಯ ಲೇಔಟ್‌ನ 30 ವರ್ಷದ ಯುವಕನಿಗೆ ಕರೆ ಮಾಡಿದ್ದ ಸೈಬರ್ ವಂಚಕರು, ದೆಹಲಿಯ ಕೆಂಪುಕೋಟೆಯ ಬಳಿ ನ.11ರ ಸಂಜೆ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ‘ನಿಮ್ಮ ಮೊಬೈಲ್ ನಂಬರ್ ಬಳಕೆ ಆಗಿರುವುದು ಕಂಡುಬಂದಿದೆ’ ಎಂದು ಬೆದರಿಸಿ ₹5.53 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಈ ಪ್ರಕರಣದ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಅಪರಾಧ ಠಾಣೆಯ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
‘ಡಿ.1ರ ಮಧ್ಯಾಹ್ನ 1.20ರ ಸುಮಾರಿಗೆ ಯುವಕನಿಗೆ ವಂಚಕನೊಬ್ಬ ಕರೆ ಮಾಡಿದ್ದ. ಭಯೋತ್ಪಾದನಾ ನಿಗ್ರಹ ದಳದ ಸಹಾಯವಾಣಿಯಿಂದ (ಎಟಿಎಸ್) ಕರೆ ಮಾಡುತ್ತಿರುವುದಾಗಿ ಹೇಳಿದ್ದ. ದೆಹಲಿಯ ಕೆಂಪುಕೋಟೆಯ ಬಳಿ ಆಗಿರುವ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿಮ್ಮ ಸಿಮ್ ಬಳಕೆ ಆಗಿದೆಯೇ ಎಂದು ಪ್ರಶ್ನಿಸಿದ್ದ. ಆಗ ಭಯಪಟ್ಟುಕೊಂಡಿದ್ದ ದೂರುದಾರ, ಇಲ್ಲ ಎಂಬುದಾಗಿ ಉತ್ತರಿಸಿದ್ದರು. ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲ ಎನ್ನುವುದೇ ಆಗಿದ್ದರೆ ಪ್ರಮಾಣ ಪತ್ರ ನೀಡಲಾಗುವುದು. ದೂರು ನೀಡಬೇಕೆಂದು ಹೇಳಿದ್ದ. ಅದಾದ ಮೇಲೆ ಕರೆಯನ್ನು ಬೇರೆ ವ್ಯಕ್ತಿಗೆ ವರ್ಗಾವಣೆ ಮಾಡಿದ್ದ. ಕರೆ ಸ್ವೀಕರಿಸಿದ್ದ ವ್ಯಕ್ತಿ, ತಕ್ಷಣವೇ ದೆಹಲಿಗೆ ಬರುವಂತೆ ಸೂಚಿಸಿದ್ದ. ದೆಹಲಿಗೆ ಬರಲು ಸಾಧ್ಯವಿಲ್ಲ ಎಂದಾಗ, ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಯೊಬ್ಬರು ವಿಡಿಯೊ ಕರೆ ಮಾಡುತ್ತಾರೆ ಎಂಬುದಾಗಿ ಬೆದರಿಸಿದ್ದ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ವಿಡಿಯೊ ಕರೆಯಲ್ಲೇ ಹೇಳಿಕೆ
‘ಡಿ.1ರಂದೇ ಗೌತಮ್ ಎಂಬಾತ ವಿಡಿಯೊ ಕರೆಯ ಮೂಲಕ ದೂರುದಾರರಿಂದ ಹೇಳಿಕೆ ಪಡೆದುಕೊಳ್ಳುವ ನಾಟಕವಾಡಿದ್ದ. ಬೇರೆ ಕಡೆಗೆ ಎದ್ದು ಹೋಗುವಂತಿಲ್ಲ. ಬೇರೆಯವರಿಗೆ ಮಾಹಿತಿ ನೀಡುವಂತಿಲ್ಲ ಎಂದು ಸೂಚಿಸಿದ್ದ. ಅದಾದ ಮೇಲೆ ಪ್ರಕರಣದಿಂದ ತಮ್ಮನ್ನು ಕಾಪಾಡುತ್ತೇವೆ. ಅದಕ್ಕೆ ಸರ್ಕಾರಿ ಶುಲ್ಕವಿದ್ದು ಪಾವತಿಸಿದರೆ ಬಿಡುತ್ತೇವೆ. ತನಿಖೆ ಪೂರ್ಣಗೊಂಡ ಬಳಿಕ ಹಣ ವಾಪಸ್ ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದ್ದ. ಆತನ ಮಾತು ನಂಬಿದ್ದ ಯುವಕ ಡಿ.1ರಿಂದ 6ರ ವರೆಗೆ ಫೋನ್ ಪೇ ಹಾಗೂ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದರು. ಘಟನೆ ನಡೆದು ಮೂರು ದಿನಗಳ ಬಳಿಕ ಸೈಬರ್ ವಂಚನೆ ಎಂಬುದು ಅರಿವಿಗೆ ಬಂದು ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.
ಭಯವೇ ವಂಚಕರಿಗೆ ಉಪಾಯ
‘ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ತಂತ್ರಗಳನ್ನೇ ವಂಚಕರು ಹೆಚ್ಚು ಬಳಸುತ್ತಿದ್ದಾರೆ. ಸ್ಪೋಟ ಹಾಗೂ ಅಕ್ರಮ ಹಣ ವರ್ಗಾವಣೆಯ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಇದರಿಂದ ನಾಗರಿಕರೂ ಸಹ ಭಯದಿಂದ ಸ್ವವಿವರ ಹೇಳಿ ಮೋಸಕ್ಕೆ ಒಳಗಾಗುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಸಿಮ್: ನೀವೇ ಬಳಸುವುದು ಸುರಕ್ಷಿತ’
‘ಸಿಮ್ ಕಾರ್ಡ್ ದುರ್ಬಳಕೆಯಾಗಿ ಸೈಬರ್ ವಂಚನೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಅಂತಹ ಸಿಮ್ ಕಾರ್ಡ್‌ನ ಮೂಲ ಬಳಕೆದಾರನೇ ಅಪರಾಧಿ ಆಗುತ್ತಾನೆ. ತಮಗೆ ಎಷ್ಟೇ ಆಪ್ತರಿದ್ದರೂ ಸಿಮ್ ಕಾರ್ಡ್ ಬೇರೆಯವರಿಗೆ ಕೊಡಬಾರದು. ಸಿಮ್ ಕಳೆದು ಹೋದರೆ ಬ್ಲಾಕ್ ಮಾಡಿಸಬೇಕು’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.