ADVERTISEMENT

ಸೈಬರ್ ಭದ್ರತೆ ನಿಯಮ ಶೀಘ್ರವೇ ಜಾರಿ: ಗೃಹ ಸಚಿವ ಜಿ.ಪರಮೇಶ್ವರ

ಸೈಬರ್‌ ಅಪರಾಧ ತನಿಖಾ ಶೃಂಗಸಭೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 14:01 IST
Last Updated 6 ಮಾರ್ಚ್ 2024, 14:01 IST
ಗೃಹ ಸಚಿವ ಜಿ.ಪರಮೇಶ್ವರ
ಗೃಹ ಸಚಿವ ಜಿ.ಪರಮೇಶ್ವರ   

ಬೆಂಗಳೂರು: ‘ರಾಜ್ಯದಲ್ಲಿ ಶೀಘ್ರವೇ ಸೈಬರ್‌ ಭದ್ರತೆ ನಿಯಮ ಜಾರಿಗೆ ತರಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.

ನಗರದಲ್ಲಿ ಸೈಬರ್‌ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರವು ಆಯೋಜಿಸಿದ್ದ ಸೈಬರ್‌ ಅಪರಾಧ ತನಿಖಾ ಶೃಂಗಸಭೆ–2024ರಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನಲ್ಲಿ ಐ.ಟಿ–ಬಿ.ಟಿ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಸೈಬರ್‌ ಭದ್ರತೆ ನಿಯಮ ಜಾರಿಗೆ ತರುವುದರಿಂದ ಹೆಚ್ಚು ಅನುಕೂಲ ಆಗಲಿದೆ. ಸೈಬರ್‌ ಭದ್ರತೆ ವಿಚಾರದಲ್ಲಿ ಬೇರೆ ರಾಜ್ಯಕ್ಕೆ ಹೋಲಿಸಿದರೆ, ಕರ್ನಾಟಕ ರಾಜ್ಯವು ಒಂದು ಹೆಜ್ಜೆ ಮುಂದಿದೆ’ ಎಂದು ಶ್ಲಾಘಿಸಿದರು.

ADVERTISEMENT

‘ದೇಶದಲ್ಲಿ ಡಿಜಿಟಲ್‌ ಸೇವೆ ಹೆಚ್ಚಾಗಿದ್ದು, ಜನರು ಸೈಬರ್‌ ಭದ್ರತೆ ಕುರಿತು ತಿಳಿದುಕೊಳ್ಳುವುದು ಅಗತ್ಯ. ವಿವಿಧ ಇಲಾಖೆಗಳು ಜನರಿಗೆ ಸೌಲಭ್ಯ ತಲುಪಿಸಲು ಡಿಜಿಟಲ್‌ ತಂತ್ರಜ್ಞಾನದ ಮೊರೆ ಹೋಗುತ್ತಿವೆ. ಸೇವಾಸಿಂಧು, ಮೊಬೈಲ್ ಬ್ಯಾಂಕಿಂಗ್, ವರ್ಚ್ಯುವಲ್ ಕ್ಲಾಸ್‌ಗಳು ಸೇರಿದಂತೆ ವಿವಿಧ ರೀತಿಯ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನದ ಮೊರೆ ಹೋಗುವ ಮೊದಲು ಸೈಬರ್‌ ಸುರಕ್ಷತೆ, ಭದ್ರತೆ ಬಗ್ಗೆಯೂ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ ಒಟ್ಟು 43 ಸೈಬರ್ ಅಪರಾಧ ಪೊಲೀಸ್‌ ಠಾಣೆಗಳಿವೆ. ಸೈಬರ್‌ ವಂಚನೆಗೆ ಒಳಗಾದವರಿಗೆ ಸುರಕ್ಷತೆ ಹಾಗೂ ನ್ಯಾಯ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಭರವಸೆ ನೀಡಿದರು.

‘ಸೈಬರ್‌ ಅಪರಾಧ ಪ್ರಕರಣ ಪತ್ತೆ ಹಚ್ಚಲು ಹಾಗೂ ಪ್ರಕರಣಗಳನ್ನು ತಡೆಯಲು ಅಧಿಕಾರಿ ಮತ್ತು ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಪೊಲೀಸ್, ನ್ಯಾಯಾಂಗ ಮತ್ತು ಭಾರತೀಯ ರಕ್ಷಣೆ ಪಡೆಗಳ 33 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಈಗಾಗಲೇ ಸಿಐಡಿ ಕಚೇರಿಯಲ್ಲಿ ಆಯೋಜಿಸಿದ್ದ ತರಬೇತಿಯಲ್ಲಿ ಪಾಲ್ಗೊಂಡಿದ್ದರು’ ಎಂದರು.

ನವೀಕರಣ: ಸಿಐಡಿ, ಇನ್ಫೊಸಿಸ್‌ ಪ್ರತಿಷ್ಠಾನಾ ಹಾಗೂ ಡೇಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್‌ ಇಂಡಿಯಾದ ಜೊತೆಗೆ ಒಪ್ಪಂದವನ್ನು ನವೀಕರಿಸುವುದು ಈ ಸೈಬರ್ ಅಪರಾಧ ಶೃಂಗಸಭೆ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದರು.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಸಿಐಡಿ ಡಿಜಿಪಿ ಎಂ.ಎ.ಸಲೀಂ, ಎಡಿಜಿಪಿ ಪ್ರಣಬ್ ಮೊಹಂತಿ,‌ ಇನ್ಪೊಸಿಸ್‌ ಫೌಂಡೇಶನ್‌ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯ ಸಿಇಒ ವಿನಾಯಕ್ ಗೋಡ್ಸೆ ಉಪಸ್ಥಿತರಿದ್ದರು‌.

ಸಭೆಯಲ್ಲಿ ಹಲವು ರಾಜ್ಯ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ತನಿಖಾ ಸಂಸ್ಥೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಶೃಂಗಸಭೆಯಲ್ಲಿ ಸೈಬರ್‌ ಅಪರಾಧ ಪತ್ತೆಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.