
ಬೆಂಗಳೂರು: ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ದಯಾನಂದ ಅವರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ವಂಚನೆ ಎಸಗಲು ಮುಂದಾಗಿದ್ದು, ಸೈಬರ್ ವಂಚಕರ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಕಲಿ ಖಾತೆ ತೆರೆದು ಹಣ ಹಾಕುವಂತೆ ಒತ್ತಾಯಿಸಿದ್ದಾರೆ ಎಂಬುದು ಗೊತ್ತಾಗಿದೆ.
ದಯಾನಂದ ಅವರ ಅಧಿಕೃತ ಖಾತೆಯಲ್ಲಿರುವ ಫೋಟೊಗಳನ್ನೇ ತೆಗೆದುಕೊಂಡು ನಕಲಿ ಖಾತೆಯಲ್ಲಿ ಹಾಕಿದ್ದಾರೆ. ನಂತರ, ದಯಾನಂದ ಅವರ ಪರಿಚಯಸ್ಥರಿಗೆ ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸಿದ್ದಾರೆ. ಬಳಿಕ, ತುರ್ತು ಹಣ ಹಾಕುವಂತೆ ಮೆಸೆಂಜರ್‌ನಲ್ಲಿ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಫೇಸ್‌ಬುಕ್‌ನಲ್ಲಿ ಈ ಹಿಂದೆಯೂ ನಕಲಿ ಖಾತೆ ತೆರೆದಿರುವ ಬಗ್ಗೆ ದಯಾನಂದ ಅವರು ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದರು. ಅದೇ ಮಾದರಿಯಲ್ಲಿ ಮತ್ತೆ ಕೃತ್ಯ ಎಸಗಿದ್ದಾರೆ.
‘ಎಡಿಜಿಪಿ ದಯಾನಂದ ಅವರ ಹೆಸರಿನಲ್ಲಿ ಸೈಬರ್ ಕಳ್ಳರು ಹಣ ಹಾಕುವಂತೆ ಸಂದೇಶ ಕಳುಹಿಸುತ್ತಿದ್ದಾರೆ. ಸಾರ್ವಜನಿಕರು ಆ ಸಂದೇಶವನ್ನು ನಂಬಿ ಹಣ ಕಳುಹಿಸಬಾರದು’ ಎಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.