
ತಾರಾ ದಂಪತಿ ಪ್ರಿಯಾಂಕಾ, ಉಪೇಂದ್ರರ ಮೊಬೈಲ್ ಹ್ಯಾಕ್ ಮಾಡಿ ವಂಚಿಸಿದವನ ಬಂಧನ
ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ ವಂಚಿಸಿದ್ದ ಆರೋಪಿಯನ್ನು ಸದಾಶಿವನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ವಿಕಾಸ್ ಕುಮಾರ್ ಬಂಧಿತ ಆರೋಪಿ.
ಆರೋಪಿ ದೆಹಲಿಯಲ್ಲಿರುವ ಸುಳಿವು ಲಭಿಸಿದ್ದರಿಂದ ವಿಶೇಷ ತಂಡವು ಅಲ್ಲಿಗೆ ತೆರಳಿತ್ತು. ಸೋನಿಯಾನಗರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ನಗರಕ್ಕೆ ಕರೆ ತರಲಾಗಿದೆ. ಆರೋಪಿಯ ಮೊಬೈಲ್ ವಶಕ್ಕೆ ಪಡೆದುಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು ಪ್ರಕರಣದ ತನಿಖೆ ಚುರುಕು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಸೆ.15ರಂದು ಪ್ರಿಯಾಂಕಾ ಅವರ ನಾಲ್ಕು ಬ್ಯಾಂಕ್ ಖಾತೆಗಳಿಂದ ₹1.65 ಲಕ್ಷವನ್ನು ಸೈಬರ್ ವಂಚಕರು ವರ್ಗಾವಣೆ ಮಾಡಿಕೊಂಡಿದ್ದರು. ಕೃತ್ಯ ನಡೆದ ಒಂದು ತಾಸಿನ ಒಳಗಾಗಿ(ಗೋಲ್ಡನ್ ಅವರ್) ಅವರು ಉಪೇಂದ್ರ ಅವರು ಸೈಬರ್ ಠಾಣೆಗೆ ಖುದ್ದು ತೆರಳಿ ಮಾಹಿತಿ ನೀಡಿದ್ದರು. ಗೋಲ್ಡನ್ ಅವರ್‌ನಲ್ಲಿ ದೂರು ನೀಡಿದ್ದರಿಂದ ಆರೋಪಿಯ ಬಂಧನ ಸಾಧ್ಯವಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.