ಸಾಂದರ್ಭಿಕ ಚಿತ್ರ
ಬೆಂಗಳೂರು: ದೂರಸಂಪರ್ಕ ಇಲಾಖೆ ಅಧಿಕಾರಿಗಳೆಂದು ಹೇಳಿಕೊಂಡು ಮಹಿಳೆಯೊಬ್ಬರಿಗೆ ಕರೆ ಮಾಡಿ ₹30 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದುವರೆಗೂ ಫೆಡೆಕ್ಸ್ ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ವಂಚಿಸುತ್ತಿದ್ದ ಸೈಬರ್ ವಂಚಕರು ಈಗ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಈಗ ದೂರಸಂಪರ್ಕ ಇಲಾಖೆ ಅಧಿಕಾರಿಗಳೆಂದು ಹೇಳಿಕೊಂಡು ವಂಚಿಸುವ ಜಾಲ ಸೃಷ್ಟಿಯಾಗಿದೆ. ನಿದಾ (ಹೆಸರು ಬದಲಾಯಿಸಲಾಗಿದೆ) ಎಂಬುವರು ಹಣ ಕಳೆದುಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಏಪ್ರಿಲ್ 8ರಂದು ದೂರಸಂಪರ್ಕ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದ ವಂಚಕರು, ‘ನಿಮ್ಮ ಆಧಾರ್ ಬಯೋಮೆಟ್ರಿಕ್ ದುರ್ಬಳಕೆಯಾಗಿದೆ. ಬ್ಯಾಂಕ್ ಖಾತೆ ಪರಿಶೀಲಿಸಬೇಕಿದೆ ಎಂದು ವಂಚಕರು ಹೇಳಿದ್ದರು’ ಎಂದು ಪೊಲೀಸರು ಹೇಳಿದರು.
‘ಮುಂಬೈನಲ್ಲಿ ಸಿಮ್ ಕಾರ್ಡ್ ಖರೀದಿಸಲು ತಮ್ಮ ಆಧಾರ್ ಬಯೋಮೆಟ್ರಿಕ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಆ ಸಿಮ್ ಕಾರ್ಡ್ ಅನ್ನು ಕಾನೂನುಬಾಹಿರ ಜಾಹೀರಾತುಗಳನ್ನು ಪ್ರಚಾರ ಮಾಡಲು ಮತ್ತು ಅಪರಾಧ ಚಟುವಟಿಕೆ ನಡೆಸಲು ಬಳಸಲಾಗುತ್ತಿದೆ ಎಂದು ಆಕೆಗೆ ವಂಚಕರು ತಿಳಿಸಿದ್ದರು. ಇದರಿಂದ ಮಹಿಳೆ ಗಾಬರಿಗೊಂಡಿದ್ದರು. ಬಳಿಕ ಬೇರೊಂದು ನಂಬರ್ ನೀಡಿ, ಸಂಪರ್ಕಿಸುವಂತೆ ವಂಚಕರು ತಿಳಿಸಿದ್ದರು. ಆ ನಂಬರ್‌ಗೆ ಕರೆ ಮಾಡಿದಾಗ ಆತ ತಾನು ಮುಂಬೈನ ಅಂಧೇರಿಯ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.
‘ಈ ವಿಷಯವನ್ನೂ ಯಾರಿಗೂ ತಿಳಿಸಬಾರದು. ತಿಳಿಸಿದರೆ ಸಮಸ್ಯೆ ಆಗಲಿದೆಯೆಂದೂ ಭಯ ಹುಟ್ಟಿಸಲಾಗಿತ್ತು. ಅದಾದ ಮೇಲೆ ಬ್ಯಾಂಕ್ ಖಾತೆಗಳ ಪರಿಶೀಲನೆ ಸೇರಿದಂತೆ ವಿವಿಧ ರೀತಿಯಲ್ಲಿ ₹30 ಲಕ್ಷದಷ್ಟು ಹಣ ಪಡೆದು ವಂಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.