ADVERTISEMENT

ಬೆಂಗಳೂರು | ಸೈಕಲ್‌ ಪಥ‌ ಅವ್ಯವಸ್ಥೆ: ಸವಾರರು ಹೈರಾಣ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 0:55 IST
Last Updated 11 ಜುಲೈ 2025, 0:55 IST
<div class="paragraphs"><p>ಆರ್‌.ಸಿ. ಕಾಲೇಜು ಬಳಿ ಸೈಕಲ್ ಪಥದಲ್ಲಿಯೇ ಬಸ್‌ ತಂಗುದಾಣ ನಿರ್ಮಾಣ ಮಾಡಲಾಗಿದೆ&nbsp;</p></div>

ಆರ್‌.ಸಿ. ಕಾಲೇಜು ಬಳಿ ಸೈಕಲ್ ಪಥದಲ್ಲಿಯೇ ಬಸ್‌ ತಂಗುದಾಣ ನಿರ್ಮಾಣ ಮಾಡಲಾಗಿದೆ 

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ಬಸವೇಶ್ವರ ವೃತ್ತದಲ್ಲಿರುವ ರಾಮನಾರಾಯಣ್ ಚೆಲ್ಲಾರಾಮ್ (ಆರ್‌.ಸಿ) ಕಾಲೇಜಿನಿಂದ ರೇಸ್‌ಕೋರ್ಸ್‌ವರೆಗಿನ ವಿಶೇಷ ಸೈಕಲ್‌ ಪಥವು ಗುಂಡಿಗಳಿಂದ ಕೂಡಿದ್ದು, ಅಲ್ಲಲ್ಲಿ ಈ ಪಥವನ್ನು ಅತಿಕ್ರಮಣ ಮಾಡಲಾಗಿದೆ. ಹೀಗಾಗಿ, ಸೈಕಲ್ ಸವಾರರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ADVERTISEMENT

‘ಟ್ರಿಣ್’ ಹೆಸರಿನ ಈ ವಿಶೇಷ ಸೈಕಲ್ ಪಥ ಅವ್ಯವಸ್ಥೆಯ ಆಗರವಾಗಿದೆ. ಆರ್‌ಸಿ ಕಾಲೇಜಿನ ಬಳಿ ಈ ಪಥವನ್ನು ಅತಿಕ್ರಮಿಸಿ, ಬಿಎಂಟಿಸಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ಭಾರತೀಯ ವಿದ್ಯಾ ಭವನ ಹಾಗೂ ಖನಿಜ ಭವನದ ಮಧ್ಯೆ ಸ್ಕೈವಾಕ್ ನಿರ್ಮಾಣ ಕಾಮಗಾರಿಗೆ ಬಳಸಿ, ಉಳಿದಿರುವ ಮರಳು ಮತ್ತು ಕಲ್ಲುಗಳು ಪಥದ ತುಂಬಾ ಹರಡಿಕೊಂಡಿವೆ. ಅಲ್ಲದೆ, ಕೆಲವೆಡೆ ಮರದ ಕೊಂಬೆಗಳು ಅಡ್ಡಲಾಗಿ ಬಿದ್ದಿವೆ.

ಸೈಕಲ್‌ ಪಥದಲ್ಲಿ ಎಲ್ಲೆಂದರಲ್ಲಿ ಕೇಬಲ್‌, ತಂತಿಗಳು ಹರಡಿಕೊಂಡಿವೆ. ಹಣ್ಣು ಮತ್ತು ತಿನಿಸುಗಳ ಮಾರಾಟಗಾರರು ಪಥದ ಮೇಲೆಯೇ ವ್ಯಾಪಾರ ಮಾಡುತ್ತಾರೆ. ಅಲ್ಲದೆ ಸೈಕಲ್ ಪಥದ ಅರಿವಿನ ಕೊರತೆಯಿಂದ ಪಾದಚಾರಿಗಳು ಸವಾರರಿಗೆ ಅಡ್ಡ ಬರುತ್ತಾರೆ. ಇದರಿಂದ ಅವರಿಗೆ ಕಿರಿಕಿರಿ ಉಂಟಾಗುತ್ತಿದೆ.

‘ನಗರದಲ್ಲಿ ಸೈಕಲ್ ಪಥಗಳು ಕಡಿಮೆ ಸಂಖ್ಯೆಯಲ್ಲಿವೆ. ಇರುವ ಪಥಗಳನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ’ ಎಂದು ದೂರುತ್ತಾರೆ ಸೈಕಲ್ ಸವಾರರು.

ಪೂರಕ ಕ್ರಿಯಾ ಯೋಜನೆ ಮತ್ತು ಉಪಕ್ರಮಗಳನ್ನು ಬಿಬಿಎಂಪಿ ಕೈಗೊಂಡಿಲ್ಲ. ವಿಶ್ವ ಮಟ್ಟದಲ್ಲಿ ತನ್ನದೇ ಆದ ಖ್ಯಾತಿಯನ್ನು ಬೆಂಗಳೂರು ಹೊಂದಿದೆ. ಆದರೆ, ಅದಕ್ಕೆ ಅಪವಾದವಾಗಿ ತೀವ್ರ ಸಂಚಾರ ಸಮಸ್ಯೆ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಗಳಲ್ಲಿ ಸೈಕ್ಲಿಂಗ್‌ ಅಸಾಧ್ಯದ ಮಾತಾಗಿದೆ ಎನ್ನುತ್ತಾರೆ ಸೈಕ್ಲಿಸ್ಟ್‌ಗಳು.

ಖನಿಜ ಭವನ ಎದುರಿನ ಸೈಕಲ್ ಪಥದಲ್ಲಿನ ಗುಂಡಿ

ನಗರ ಭೂ ಸಾರಿಗೆ ನಿರ್ದೇಶನಾಲಯದ ವಿಶೇಷ ಅಧಿಕಾರಿ ಮೋನಿಕಾ ಅವರು ಸಮಸ್ಯೆ ಕುರಿತು ದೂರವಾಣಿ ಕರೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಡಿ ನಗರ ಭೂಸಾರಿಗೆ ನಿರ್ದೇಶನಾಲಯ 5 ಕಿ.ಮೀ ಉದ್ದದ ಈ ಪಥವನ್ನು 2021ರಲ್ಲಿ ನಿರ್ಮಿಸಿದೆ. ನಗರದಲ್ಲಿ ಸೈಕಲ್ ಸವಾರಿ ಉತ್ತೇಜಿಸುವುದು, ಸವಾರರಿಗೆ ಮೂಲಸೌಕರ್ಯ ಒದಗಿಸುವುದು ಈ ಯೋಜನೆಯ ಉದ್ದೇಶ. ದೈಹಿಕ ಸದೃಢತೆ ಮತ್ತು ಮಾನಸಿಕ ಆರೋಗ್ಯಕ್ಕೆ ಸೈಕಲ್ ಸವಾರಿ ಸಹಕಾರಿ ಆಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಸೈಕ್ಲಿಸ್ಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.

ಸ್ಕೈವಾಕ್‌ ನಿರ್ಮಾಣಕ್ಕೆ ತರಿಸಿರುವ ಮರಳು ಪಥದ ಮೇಲೆ ಹರಡಿಕೊಂಡಿದೆ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಯೋಜನಾಬದ್ಧವಾಗಿ ಪಥ ನಿರ್ಮಾಣ ಮಾಡುತ್ತಿಲ್ಲ. ವಿಧಾನಸೌಧ ಬಳಿ ಕೇವಲ ತೋರಿಕೆಗಾಗಿ ಪಥ ನಿರ್ಮಿಸಲಾಗಿದೆ. ಸೈಕಲ್ ಪಥಗಳನ್ನು ನಿರ್ಮಿಸುವಾಗ ಸರ್ಕಾರವು ಸೈಕಲಿಸ್ಟ್‌ಗಳ ಜತೆಗೆ ಸಭೆ ನಡೆಸಿ ಅವರ ಸಲಹೆಗಳನ್ನು ಪರಿಗಣಿಸಬೇಕು. 
– ಸುನೀಲ್ ಕೆ.ಜಿ ಬೈಸಿಕಲ್ ಡೀಲರ್ ಅಸೋಸಿಯೇಷನ್ ಸ್ವಯಂಸೇವಕ
ನಗರದಲ್ಲಿ ಸೈಕಲಿಂಗ್‌ಗೆ ಸೂಕ್ತ ಸೌಲಭ್ಯಗಳು ಇಲ್ಲ. ಹಿಗಾಗಿ ಐಟಿ ಉದ್ಯೋಗಿಗಳು ಸೇರಿದಂತೆ ಬಹಳಷ್ಟು ಸೈಕಲಿಸ್ಟ್‌ಗಳು ಕಾರಿನ ಹಿಂಬದಿಯಲ್ಲಿ ಸೈಕಲ್‌ ಇರಿಸಿ 50 ರಿಂದ 60 ಕಿ.ಮೀ ದೂರ ಕ್ರಮಿಸಿ ನಗರ ಹೊರವಲಯಗಳಲ್ಲಿ ಸೈಕಲಿಂಗ್‌ ಮಾಡುವ ಪರಿಸ್ಥಿತಿ ಬಂದಿರುವುದು ದುರಂತ. 
– ಸಂದೇಶ್ ಬಿ.ಎನ್‌  ಫ್ರೀಡಂ ಪೆಡಲ್ ಅಸೋಸಿಯೇಷನ್ ಸ್ಥಾಪಕ
ನಗರದಲ್ಲಿ ಸೈಕಲ್ ಪಥಗಳು ಅಲ್ಲಲ್ಲಿ ಬಿಡಿ ಬಿಡಿಯಾಗಿರುವುದರಿಂದ ದೀರ್ಘ ಸವಾರಿ ಸಾಧ್ಯವಾಗುತ್ತಿಲ್ಲ.  ಇವುಗಳ ಜೋಡಣೆ ಮಾಡಿ ಪಥದ ಉದ್ದ ಹೆಚ್ಚಿಸಬೇಕು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಸೈಕಲ್ ನಿಲ್ದಾಣ ನಿರ್ಮಾಣ ಮಾಡಬೇಕು. 
– ದೇವಿ ದತ್ ಐಟಿ ಉದ್ಯೋಗಿ

ಸೈಕಲ್‌ ಸವಾರರ ಬೇಡಿಕೆಗಳು

  • ನಗರದ ಪ್ರಮುಖ ಕಾರಿಡಾರ್‌ಗಳು ಮತ್ತು ಹೊರವರ್ತುಲ ರಸ್ತೆ ಸೇರಿದಂತೆ 2000 ಕಿ.ಮೀ ಉದ್ದದ ಸುರಕ್ಷಿತ ಸೈಕಲ್‌ ಪಥ ನಿರ್ಮಾಣ

  • ಮೆಟ್ರೊ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಉಚಿತ ಸುರಕ್ಷಿತ ಮತ್ತು ಲಾಕ್ ಮಾಡಬಹುದಾದ ಸೈಕಲ್ ಪಾರ್ಕಿಂಗ್ ಸೌಲಭ್ಯ 

  • ಜನನಿಬಿಡ ಶಾಪಿಂಗ್ ಬೀದಿಗಳನ್ನು ಕಾರು ಮುಕ್ತ ವಲಯಗಳಾಗಿ ಗೊತ್ತುಪಡಿಸಿ ಪಾದಚಾರಿ ಮತ್ತು ಸೈಕ್ಲಿಸ್ಟ್‌ಗಳಿಗೆ ಅನುಕೂಲ ಕಲ್ಪಿಸುವುದು

  • ಸೈಕಲ್ ಸವಾರಿ ಉತ್ತೇಜನಕ್ಕೆ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡಬೇಕು

  • ರಸ್ತೆ ವಿಭಜಕಗಳ ಮೂಲಕ ಸೈಕಲ್ ಪಥ ಪ್ರತ್ಯೇಕಿಸುವುದು ನಿಯಮ ಉಲಂಘಿಸಿ ಈ ಪಥ ಪ್ರವೇಶಿಸುವ ವಾಹನಗಳಿಗೆ ಅಧಿಕ ದಂಡ ವಿಧಿಸಬೇಕು.

  • 1000 ಪಾರ್ಕಿಂಗ್ ಹಬ್‌ಗಳೊಂದಿಗೆ ಸಾರ್ವಜನಿಕ ಬೈಸಿಕಲ್ ಹಂಚಿಕೆ (ಪಿಬಿಎಸ್) ವ್ಯವಸ್ಥೆ ಪುನರುಜ್ಜೀವನ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.