ದಾಬಸ್ ಪೇಟೆ: ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಹೊಸಹಳ್ಳಿ ಗ್ರಾಮದಿಂದ ಚನ್ನ ತಿಮ್ಮಯ್ಯನ ಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಮಳೆಯಿಂದ ಕೆಸರು ಗದ್ದೆಯಂತಾಗಿದ್ದು, ಸಂಚಾರಕ್ಕೆ ಅಡಚಣೆ ಆಗಿದೆ.
ರಸ್ತೆಯು ಸಂಪೂರ್ಣ ಹಾಳಾಗಿದ್ದು, ದ್ವಿಚಕ್ರ ವಾಹನಗಳ ಸಂಚಾರ ಪ್ರಯಾಸವಾಗಿದೆ. ಅಲ್ಲಲ್ಲಿ ಗುಂಡಿ ಬಿದ್ದಿದ್ದು, ನಿಯಂತ್ರಣ ಕಳೆದುಕೊಂಡು ಸವಾರರು ಕೆಳಗೆ ಬಿದ್ದಿರುವ ಉದಾಹರಣೆಯೂ ಉಂಟು. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಹರಸಾಹಸ ಪಡಬೇಕು. ಕಾಲುಗಳಿಗೆ ಕೆಸರು ಮೆತ್ತಿಕೊಂಡು, ಸಾಕಷ್ಟು ತೊಂದರೆ ಆಗಲಿದೆ.
ಈ ರಸ್ತೆಯಲ್ಲಿ ನಿತ್ಯ ಕಾರ್ಖಾನೆಗಳಿಗೆ ಹೋಗುವ ಕಾರ್ಮಿಕರು, ಶಾಲಾ ಮಕ್ಕಳು, ರೈತರು ಓಡಾಡುತ್ತಾರೆ.
‘ಎರಡು ಗ್ರಾಮಗಳ ಸಾರ್ವಜನಿಕರಿಗೆ ಸಂಪರ್ಕ ಸೇತುವೆಯಾಗಿ ಇದೊಂದೇ ರಸ್ತೆ ಇದೆ. ಹಾಗಾಗಿ ಅನಿವಾರ್ಯವಾಗಿ ಈ ರಸ್ತೆಯಲ್ಲಿ ಸಂಚರಿಸಬೇಕಿದೆ’ ಎಂದು ಹೊಸಹಳ್ಳಿ ಗ್ರಾಮದ ಹೇಮಂತ್ ಬೇಸರ ವ್ಯಕ್ತಪಡಿಸಿದರು.
‘ರಸ್ತೆಯ ಎರಡು ಕಡೆ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ರಸ್ತೆ ಹಾಳಾಗಲು ಕಾರಣ. ನೂರಾರು ಜನರು ಸಂಚರಿಸುವ ರಸ್ತೆಯನ್ನುಕೂಡಲೇ ದುರಸ್ತಿ ಮಾಡಿಕೊಡಬೇಕು. ಪಂಚಾಯತಿ ಆಡಳಿತ, ಶಾಸಕರು ಹಾಗೂ ಸಂಬಂಧ ಪಟ್ಟ ಇಲಾಖೆಯವರು ಗಮನ ಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.