
ಬೊಮ್ಮನಹಳ್ಳಿ: ಬೇಗೂರು ಗ್ರಾಮದ 62 ದಲಿತ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ 26 ವರ್ಷಗಳ ಹಿಂದೆಯೇ ಭೂಮಿ ಮಂಜೂರಾಗಿದ್ದು, ಜಾಗವನ್ನೂ ಗುರುತಿಸಲಾಗಿದೆ. ಆದರೆ, ಇದುವರೆಗೂ ನಿವೇಶನ ಹಂಚಿಕೆಯಾಗಿಲ್ಲ.
ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಗ್ರಾಮದ ಸರ್ವೆ ನಂ.302ರಲ್ಲಿ 1 ಎಕರೆ 32 ಗುಂಟೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನಕ್ಕಾಗಿ 1994ರಲ್ಲಿ ಆಗಿನ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರು. ಆಗಿನಿಂದಲೂ ನಿವೇಶನ ದೊರೆತು ನೆಲೆ ಸಿಗಬಹುದು ಎಂದು ದಲಿತ ಕುಟುಂಬಗಳು ಕಾಯುತ್ತಲೇ ಇವೆ.
ಸರ್ವೆ ನಂ.302ರ 3 ಎಕರೆ 33 ಗುಂಟೆ ಜಮೀನಿನಲ್ಲಿ 2 ಎಕರೆ 23 ಗುಂಟೆ ಜಮೀನು ಸರ್ಕಾರಿ ಗುಂಡುತೋಪು ಎಂದು ಪಹಣಿಯಲ್ಲಿ ಇದೆ. ಜಮೀನಿನಲ್ಲಿ ಬೇಗೂರು ಪೊಲೀಸ್ ಠಾಣೆ ಕಟ್ಟಡಕ್ಕಾಗಿ 1 ಎಕರೆ 10 ಗುಂಟೆ ಜಮೀನನ್ನು ಮಂಜೂರು ಮಾಡಲಾಗಿದೆ. ಉಳಿದ ಜಮೀನಿನಲ್ಲಿ ಪ್ರತಿ ಕುಟುಂಬಕ್ಕೆ 20X30 ಅಡಿ ನಿವೇಶನವನ್ನು ಮಂಜೂರು ಮಾಡಲಾಗಿತ್ತು.
ಮಂಜೂರಾತಿ ಆದೇಶ ದೊರೆತ ಸಂದರ್ಭದಲ್ಲಿ ಬೇಗೂರು ಗ್ರಾಮವು ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ತಹಶೀಲ್ದಾರ್ ಅವರು, ಆಗಿನ ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ (ಬಿಡಿಒ) ಪತ್ರ ಬರೆದು ವರದಿ ಕೇಳಿದ್ದರು. ಅದರಂತೆ ಪರಿಶೀಲನೆ ನಡೆಸಿ ಈ ಜಮೀನಿನಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಹಕ್ಕುಪತ್ರ ನೀಡಬಹುದೆಂದು ಬಿಡಿಒ ವರದಿ ನೀಡಿದ್ದರು. ಆದರೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿಲ್ಲ. ಬಳಿಕ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಬೇಗೂರು ಗ್ರಾಮ, 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿತು.
ಫಲಾನುಭವಿಗಳಾದ ಮುನಿಯಪ್ಪ. ಬಿ.ಸಿ.ವೆಂಕಟೇಶ್, ಆಂಜಿನಪ್ಪ, ಕುಮಾರ್ ಎಂ. 2022ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮಂಜೂರಾಗಿರುವ ನಿವೇಶನಗಳನ್ನು ಫಲಾನುಭವಿಗಳಿಗೆ ಕೂಡಲೇ ಹಂಚಿಕೆ ಮಾಡಬೇಕು ಎಂದು 2024ರ ಜೂನ್‌ನಲ್ಲಿ ತೀರ್ಪು ನೀಡಿತ್ತು. ಇಷ್ಟೆಲ್ಲ ಆದರೂ, ಇದುವರೆಗೂ ನಿವೇಶನಗಳ ಹಂಚಿಕೆಯಾಗಿಲ್ಲ.
ʼಬೇಗೂರು ಗ್ರಾಮ ಬಿಬಿಎಂಪಿಗೆ ಒಳಪಟ್ಟ ಮೇಲೆ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ, ಬದಲಾಗಿ ತಹಶೀಲ್ದಾರ್ ಮೂಲಕವೇ ಹಂಚಿಕೆ ಮಾಡಿಸಿಕೊಳ್ಳಿ ಎಂದು ಇಲ್ಲಿ ಕಾರ್ಯನಿರ್ವಹಿಸಿದ ಬಹುತೇಕ ಜಂಟಿ ಆಯುಕ್ತರು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಪ್ರಯತ್ನ ನಡೆಸಿದರು. ಈಗಲೂ ದಲಿತರ ಬಗ್ಗೆ ಕರುಣೆ ತೋರುತ್ತಿಲ್ಲʼ ಎಂದು ಫಲಾನುಭವಿ ಎಚ್.ಮುನಿಯಪ್ಪ 26 ವರ್ಷದ ಹಾದಿಯನ್ನು ಬಿಡಿಸಿಟ್ಟರು.
ಜಿಬಿಎ ರಚನೆಯಾದ ನಂತರ ಬೇಗೂರು ಪ್ರದೇಶ ವಲಯ 1ಕ್ಕೆ ಸೇರಿದೆ. ಜಮೀನಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆಎಂ.ಎಂ.ಮಧು, ಜಂಟಿ ಆಯುಕ್ತೆ ವಲಯ 1 ಬೆಂಗಳೂರು ದಕ್ಷಿಣ ನಗರಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.