ADVERTISEMENT

ಸರ್ಕಾರದಿಂದ ದಲಿತ ವಿರೋಧಿ ನಡೆ: ದಲಿತ ಸಂಘಟನೆಗಳ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 14:12 IST
Last Updated 10 ಸೆಪ್ಟೆಂಬರ್ 2025, 14:12 IST
   

ಬೆಂಗಳೂರು: ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಬುಡಕಟ್ಟುಗಳ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡದೇ ಸರ್ಕಾರವು ದಲಿತ ವಿರೋಧಿ ನಡೆಯನ್ನು ಪ್ರದರ್ಶಿಸಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.

2003ರಲ್ಲಿ ಆಯೋಗವು ಅಸ್ತಿತ್ವಕ್ಕೆ ಬಂದಿದೆ. ಎರಡೂವರೆ ವರ್ಷಗಳಿಂದ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ರಾಜ್ಯದಲ್ಲಿ ದಲಿತ ಸಮುದಾಯಗಳಿಗೆ ರಕ್ಷಣೆ ಮತ್ತು ನ್ಯಾಯ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿರುವುದಕ್ಕೆ ಇದು ಉದಾಹರಣೆ ಎಂದು ಒಕ್ಕೂಟದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿಯವರೆಗೆ 11 ಮಂದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಒಂದಿಬ್ಬರನ್ನು ಹೊರತುಪಡಿಸಿ ಯಾರೂ ಸಮರ್ಥವಾಗಿ ಕಾರ್ಯನಿರ್ವಹಿಸಿಲ್ಲ. ದೂರುಗಳನ್ನು ವಿಲೇವಾರಿ ಮಾಡಿಲ್ಲ. ಆಯೋ‌ಗದಲ್ಲಿ ಇಲ್ಲಿಯವರೆಗೆ 1,727 ದೂರುಗಳು ಬಾಕಿ ಉಳಿದಿವೆ.‌ ಆಯೋಗಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕಂದಾಯ ಇಲಾಖೆಯಲ್ಲಿ ಅತಂತ್ರ ಸ್ಥಿತಿಯಲ್ಲಿರುವ 12 ಸಾವಿರ ಗ್ರಾಮ ಸಹಾಯಕರನ್ನು ಕಾಯಂಗೊಳಿಸದೇ ಇರುವುದರಿಂದ ದಲಿತರಿಗೆ ವಂಚನೆಯಾಗಿದೆ. ಪಿಟಿಸಿಎಲ್‌ ಕಾಯ್ದೆಗೆ ಸಮಗ್ರ ತಿದ್ದುಪಡಿ ಮಾಡದೇ ಇರುವುದರಿಂದ ದಲಿತರು ಜಮೀನು ಕಳೆದುಕೊಳ್ಳುತ್ತಿದ್ದಾರೆ. ಎಸ್‌ಸಿಎಸ್‌ಪಿ–ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದರಿಂದ ದಲಿತರ ಅಭಿವೃದ್ಧಿಗೆ ಕಂಟಕವಾಗಿದೆ. ವಿಧಾನ ಪರಿಷತ್ತಿಗೆ ದಲಿತ ಹೋರಾಟಗಾರರನ್ನು ನಾಮನಿರ್ದೇಶನ ಮಾಡದೇ ಸರ್ಕಾರವು ದಲಿತ ಚಳವಳಿಗೆ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.