ದರ್ಶನ್, ಪವಿತ್ರಾ ಗೌಡ
ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ, ಆರೋಪಿ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಸಿಸಿಎಚ್ 64ನೇ ನ್ಯಾಯಾಲಯ ಆಗಸ್ಟ್ 23ಕ್ಕೆ ಮುಂದೂಡಿತು.
ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ಪಡೆದಿದ್ದರಿಂದ ರಾಜ್ಯದ ಬೇರೆ ಬೇರೆ ಕಾರಾಗೃಹಕ್ಕೆ ಕೊಲೆ ಆರೋಪಿಗಳನ್ನು ಈ ಹಿಂದೆ ಸ್ಥಳಾಂತರಿಸಲಾಗಿತ್ತು. ಅದೇ ಕಾರಾಗೃಹಕ್ಕೆ ಐವರು ಆರೋಪಿಗಳನ್ನು ಸ್ಥಳಾಂತರ ಮಾಡಲು ಅನುಮತಿ ನೀಡುವಂತೆ ಕೋರಿ ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಲಯಕ್ಕೆ ಸೋಮವಾರ ಅರ್ಜಿಸಲ್ಲಿಸಿದರು.
‘ಬೇರೆ ಕಾರಾಗೃಹಕ್ಕೆ ಸ್ಥಳಾಂತರ ಮಾಡುವುದಾದರೆ ನಮ್ಮ ವಾದವನ್ನೂ ಆಲಿಸಬೇಕು’ ಎಂದು ಆಗಸ್ಟ್ 14ರಂದೇ ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಾಧೀಶರು, ದರ್ಶನ್ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದರು.
'ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಅವರನ್ನು ಶಿವಮೊಗ್ಗ ಕಾರಾಗೃಹಕ್ಕೆ, ನಾಗರಾಜ್ ಅವರನ್ನು ಕಲಬುರಗಿ ಜೈಲಿಗೆ, ಪ್ರದೂಷ್ ರಾವ್ ಅವರನ್ನು ಬೆಳಗಾವಿ ಕಾರಾಗೃಹಕ್ಕೆ ವರ್ಗಾವಣೆ ಮಾಡುವಂತೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರಾ ಗೌಡ ಮತ್ತು ಅನುಕುಮಾರ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಇರಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ಪತಿ ದರ್ಶನ್ ಅವರ ಆರೋಗ್ಯ ವಿಚಾರಿಸಿದರು. ಮುಂದಿನ ಕಾನೂನು ಹೋರಾಟದ ಬಗ್ಗೆ ದರ್ಶನ್ ಅವರೊಂದಿಗೆ ಚರ್ಚಿಸಿದರು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.