ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಅವರಿಗೆ ಮೂಲಸೌಲಭ್ಯ ಕಲ್ಪಿಸಲು ಜೈಲಿನ ಅಧಿಕಾರಿಗಳಿಗೆ ಮತ್ತೊಮ್ಮೆ ನಿರ್ದೇಶನ ನೀಡಬೇಕು ಎಂದು ಕೋರಿ ದರ್ಶನ್ ಪರ ವಕೀಲರು, 57ನೇ ಎಸಿಎಂಎಂ ನ್ಯಾಯಾಲಯಕ್ಕೆ ಸೋಮವಾರ ಮೂರನೇ ಬಾರಿ ಅರ್ಜಿ ಸಲ್ಲಿಸಿದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಅ.9ಕ್ಕೆ ಆದೇಶ ನೀಡುವುದಾಗಿ ಹೇಳಿ ಮುಂದೂಡಿದರು.
ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಲಾಗಿದೆ. ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಅವರ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಾಸವಾಗಿದೆ. ಈ ಹಿಂದೆ ನ್ಯಾಯಾಲಯವು ನೀಡಿದ್ದ ಆದೇಶಕ್ಕೂ ಜೈಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ನ್ಯಾಯಾಧೀಶರೇ ಖುದ್ದು ಜೈಲಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಅರ್ಜಿಯಲ್ಲಿ ವಕೀಲರು ಕೋರಿದ್ದಾರೆ.
‘ಜೈಲಿಗೆ ನ್ಯಾಯಾಧೀಶರು ಭೇಟಿ ನೀಡಿ ಸತ್ಯಾಸತ್ಯತೆಯ ಪರಿಶೀಲನೆ ನಡೆಸಲಿ. ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದೆಯೇ ಅಥವಾ ಬೇರೆ ಬ್ಯಾರಕ್‌ನಲ್ಲಿ ಇಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
‘ಜೈಲಿನಲ್ಲಿ ಕನಿಷ್ಠ ಮೂಲಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್ ಕಾಣಿಸಿಕೊಂಡಿದೆ (ಚರ್ಮದ ಅಲರ್ಜಿ). ಬೇರೆ ಯಾರಿಗೂ ಬೇಡ. ನನಗೆ ಮಾತ್ರ ವಿಷ ನೀಡಲಿ. ಈ ಸಂಬಂಧ ಕೋರ್ಟ್ ಆದೇಶ ನೀಡಲಿ...’ ಎಂದು ದರ್ಶನ್ ಅವರು ಈ ಹಿಂದೆ ವಿಡಿಯೊ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ವೇಳೆ ನ್ಯಾಯಾಧೀಶರ ಎದುರು ಅಲವತ್ತುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.