ADVERTISEMENT

ವಿಜಯಲಕ್ಷ್ಮೀಗೆ ಮೂರನೇ ನೋಟಿಸ್‌ ನೀಡಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 18:29 IST
Last Updated 14 ಸೆಪ್ಟೆಂಬರ್ 2025, 18:29 IST
ವಿಜಯಲಕ್ಷ್ಮೀ
ವಿಜಯಲಕ್ಷ್ಮೀ   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಅಶ್ಲೀಲ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಮೂರನೇ ಬಾರಿಗೆ ನೋಟಿಸ್ ಜಾರಿ ಮಾಡಿ, ವಿವರಣೆ ಪಡೆಯಲು ನಿರ್ಧರಿಸಿದ್ದಾರೆ.

ಜಾಲತಾಣಗಳಲ್ಲಿ ವಿಜಯಲಕ್ಷ್ಮೀ ಬಗ್ಗೆ ಅಶ್ಲೀಲವಾಗಿ ಪೋಸ್ಟ್‌ಗಳನ್ನು ಹಾಕಿದ್ದರು. ಈ ಸಂಬಂಧ ಸಾಮಾಜಿಕ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಎಂಬುವರು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರನ್ನು ಕೋರಿದ್ದರು. ರಾಜ್ಯ ಮಹಿಳಾ ಆಯೋಗಕ್ಕೂ ದೂರು ಕೊಟ್ಟಿದ್ದರು.

ಮಹಿಳಾ ಆಯೋಗದ ಸೂಚನೆ ಮೇರೆಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಭಾಸ್ಕರ್ ಪ್ರಸಾದ್ ಅವರಿಗೆ ನೋಟಿಸ್ ಜಾರಿಗೊಳಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷ್ಯಾಧಾರ ಒದಗಿಸುವಂತೆ ಸೂಚಿಸಿದ್ದರು.

ADVERTISEMENT

ಪ್ರಕರಣ ಸಂಬಂಧ ವಿಜಯಲಕ್ಷ್ಮಿ ಅವರ ವಿವರಣೆ ಪಡೆಯಲು ಹಾಗೂ ಹೇಳಿಕೆ ದಾಖಲಿಸಲು ಎರಡು ಬಾರಿ ನೋಟಿಸ್ ಕಳುಹಿಸಲಾಗಿತ್ತು. ಆದರೆ, ಈವರೆಗೂ ನೋಟಿಸ್‍ಗೆ ವಿಜಯಲಕ್ಷ್ಮಿ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಮೂರನೇ ಬಾರಿಗೆ ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಮೂರನೇ ನೋಟಿಸ್‍ಗೂ ಅವರು ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಪ್ರಕರಣವನ್ನು ಮುಕ್ತಾಯಗೊಳಿಸಿ, ನ್ಯಾಯಾಲಯಕ್ಕೆ ಸಿ ರಿಪೋರ್ಟ್‌ ಸಲ್ಲಿಸಲಿದ್ದಾರೆ.

ವಿಜಯಲಕ್ಷ್ಮಿ ಅವರಿಗೆ 6 ‘ಎಕ್ಸ್’ ಖಾತೆಗಳಿಂದ ಅಸಭ್ಯ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಆ ಖಾತೆಗಳು ಎರಡು ವರ್ಷಗಳ ಹಿಂದೆಯೇ ಡಿಲಿಟ್‌ ಆಗಿವೆ. ಈ ಎಲ್ಲಾ ಮಾಹಿತಿ ಸಂಗ್ರಹಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.