ADVERTISEMENT

ಡೇಟಿಂಗ್ ಆ್ಯಪ್‌ ಸ್ನೇಹ: ₹ 15.37 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 14 ಮೇ 2023, 21:07 IST
Last Updated 14 ಮೇ 2023, 21:07 IST
ಡೇಟಿಂಗ್ ಆ್ಯಪ್ ಸ್ನೇಹ- ಪ್ರಾತಿನಿಧಿಕ ಚಿತ್ರ
ಡೇಟಿಂಗ್ ಆ್ಯಪ್ ಸ್ನೇಹ- ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿ ಹಾಗೂ ಇತರರು ಉಡುಗೊರೆ ನೆಪದಲ್ಲಿ ₹15.37 ಲಕ್ಷ ಪಡೆದು ವಂಚಿಸಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೊಮ್ಮನಹಳ್ಳಿ ನಿವಾಸಿಯಾಗಿರುವ 30 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರು ದೂರು ನೀಡಿದ್ದಾರೆ. ಯುವತಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ ಡೇಟಿಂಗ್ ಆ್ಯಪ್‌ವೊಂದರಲ್ಲಿ ಖಾತೆ ಹೊಂದಿದ್ದರು. ಅಲ್ಲಿಯೇ ಅವರಿಗೆ ಯುವತಿ ಪರಿಚಯವಾಗಿತ್ತು. ನಂತರ, ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು. ವಿದೇಶದಲ್ಲಿರುವುದಾಗಿ ಹೇಳಿದ್ದ ಯುವತಿ, ಸದ್ಯದಲ್ಲೇ ಭಾರತಕ್ಕೆ ಬಂದು ಉಡುಗೊರೆ ನೀಡುವುದಾಗಿ ಹೇಳಿದ್ದರು.’

ADVERTISEMENT

‘ಇದೇ ಜನವರಿ 20ರಂದು ದೂರುದಾರರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ನಿಮ್ಮ ಗೆಳತಿ ಉಡುಗೊರೆ ಕಳುಹಿಸಿದ್ದಾರೆ. ಅದು ಸದ್ಯ ದೆಹಲಿ ವಿಮಾನ ನಿಲ್ದಾಣದಲ್ಲಿದೆ. ಅದನ್ನು ಬಿಡಿಸಿಕೊಳ್ಳಲು ಶುಲ್ಕ ಪಾವತಿ ಮಾಡಬೇಕು’ ಎಂದಿದ್ದ. ಅದನ್ನು ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 15.37 ಲಕ್ಷ ನೀಡಿದ್ದ. ಇದಾದ ನಂತರ, ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದು ತಿಳಿಸಿವೆ.

‘ಯುವತಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಆರೋಪಿಗಳು ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಮೊಬೈಲ್ ಸಂಖ್ಯೆ ಹಾಗೂ ಇತರೆ ತಾಂತ್ರಿಕ ಪುರಾವೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.